ನಿಶಾಂತ್ ದೇಸಾಯಿ
ನಮ್ಮಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಕ್ರೇಜ್ ಎಂದರೆ ಅದು ಬೈಕ್ ರೈಡಿಂಗ್ ಮಾಡುವುದು. ಬೈಕ್ ಏರಿ ದೇಶದ ಉದ್ದಗಲಕ್ಕೂ ಸಂಚರಿಸಬೇಕು, ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂಬುದು ಸಾಕಷ್ಟು ಮಂದಿ ಯುವಕರ ಬಯಕೆ. ಈಗಾಗಲೇ ಭಾರತದ ದಕ್ಷಿಣ ತುದಿಯಿಂದ ಉತ್ತರದ ತುದಿಯವರೆಗೂ ಬೈಕ್ ಓಡಿಸಿದವರಿದ್ದಾರೆ.
ಒಮ್ಮೆಯಾದರೂ ಬೈಕ್‌ನಲ್ಲಿ ಲಡಾಕ್‌ಗೆ ಹೋಗಿ ಬರಬೇಕು ಎಂಬುದು ಎಲ್ಲ ಬೈಕ್ ಪ್ರೇಮಿಗಳ ಒಂದು ಗುರಿ. ಅಂತಹದ್ದೇ ಒಂದು ಕ್ರೇಜ್ ತಲೆಗೆ ಹತ್ತಿಸಿಕೊಂಡವರಲ್ಲಿ ನಾನೂ ಒಬ್ಬ. ನಾನು ನನ್ನ ಸ್ನೇಹಿತ ಅಲೋಕ್ ಲಡಾಕ್‌ಗೆ ಒಂದು ಬೈಕ್ ರೈಡ್ ಹೋಗಿ ಬರಬೇಕು ಎಂದು ನಿರ್ಧರಿಸಿ ಬೆಂಗಳೂರಿನಿಂದ ಕಾಶ್ಮೀರದಲ್ಲಿರುವ ಭಾರತ ಮತ್ತು ಟಿಬೆಟ್ ಗಡಿಯವರೆಗೆ ಪ್ರಯಾಣಿಸಿದ್ದು ಒಂದು ರೋಚಕ ಅನುಭವ.
ನಾನು ನಿಶಾಂತ್ ದೇಸಾಯಿ, ಬೆಂಗಳೂರು ಮೂಲದವನು. ನಾನೊಬ್ಬ ಹವ್ಯಾಸಿ ವನ್ಯಜೀವಿ ಛಾಯಾಗ್ರಹಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನದಂತಹ ವಿವಿಧ ರಾಜ್ಯಗಳ ಕಾಡಿಗೆ ಹೋಗಿ ಅಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದೇನೆ. ಅದು ಒಂದು ರೀತಿಯ ಅನುಭವವಾದರೆ, ಬೈಕ್‌ನಲ್ಲಿ ವಿವಿಧ ರಾಜ್ಯಗಳಿಗೆ ಭೇಟಿ ನೀಡುವುದು, ಅಲ್ಲಿನ ಜನರೊಂದಿಗೆ ಬೇರೆಯುವುದು ಬೇರೆಯೇ ಹೊಸ ಅನುಭವ.
ಬೆಂಗಳೂರಿನಿಂದ ಹೊರಟ ನಮ್ಮ ಪ್ರಯಾಣ ತಲುಪಿದ್ದು, 10 ವಿವಿಧ ರಾಜ್ಯಗಳು ಕೊನೆಗೆ ಭಾರತ ಮತ್ತು ಟಿಬೆಟ್‌ನ ಗಡಿಯಾದ ಅಮ್‌ಲಿಂಗ್‌ಲಾ ಎಂಬ ಎತ್ತರ ಪ್ರದೇಶವನ್ನು. ಬರೋಬ್ಬರಿ 24 ದಿನಗಳ 6,500 ಕಿ.ಮೀ.ಗಳಷ್ಟು ಪ್ರಯಾಣಿಸಿದ ನಮಗೆ ಹೊಸದೊಂದು ಭಾರತ ತೆರೆದುಕೊಂಡಿತ್ತು. ವಿವಿಧ ರಾಜ್ಯಗಳ ವಿವಿಧ ಸಂಸ್ಕೃತಿ, ಅವರ ವಸ್ತ್ರ ವಿನ್ಯಾಸ, ಆಚಾರ-ವಿಚಾರ, ಆಹಾರ ಎಲ್ಲವೂ ವಿಭಿನ್ನವೆನಿಸಿದರೂ, ಅವುಗಳ ಪರಿಚಯವಾದದ್ದು ಮಾತ್ರ ಉತ್ತಮ ಅನುಭವ.
ಕರ್ನಾಟಕದಿಂದ ಆರಂಭವಾದ ನಮ್ಮ ಪ್ರಯಾಣ ಮೊದಲು ಮುಟ್ಟಿದ್ದು, ಮಹಾರಾಷ್ಟ್ರವನ್ನು. ಅಲ್ಲಿನ ಗುಣಮಟ್ಟದ ಹೈವೆ ರಸ್ತೆಗಳು ನಮ್ಮನ್ನು ಸ್ವಾಗತಿಸಿದವು. ನಾವು ಭಾರತ ಅಭಿವೃದ್ಧಿ ಹೊಂದಿದೆಯೋ ಹೊಂದಬೇಕೋ ಎಂಬುದನ್ನು ಅರಿವುದಾದರೂ ಹೇಗೆ? ಬೇಕು-ಬೇಡಗಳು ಸುಲಭವಾಗಿ ಸಿಗುವ ಅತೀ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿರುವ ನಾವು ಭಾರತದ ಮತ್ತೊಂದು ಭಾಗವನ್ನು ಅರಿಯಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ನಮ್ಮ ಪ್ರಯಾಣವೇ ಉತ್ತರವಾಗಿತ್ತು. ನಾವು ಸಾಗಿದಂತೆಲ್ಲ ಅಲ್ಲಲ್ಲಿ ಅಕ್ಕಪಕ್ಕದ ಹಳ್ಳಿಗಳ ಮೇಲೂ ಹಾದು ಹೋದೆವು. ಆಗ ಭಾರತದ ವಿವಿಧ ರಾಜ್ಯಗಳ ಜನಜೀವನದ ಪರಿಚಯವಾಯಿತು. ರೈತರ ಬವಣೆಗಳು ಅರ್ಥವಾಗತೊಡಗಿದವು. ಆಗ ಅನಿಸಿದ್ದು ಒಂದೇ, ಭಾರತದಲ್ಲಿ ಇನ್ನೂ ಬಗೆಹರಿಯಬೇಕಾದ ಸಾವಿರಾರು ಸಮಸ್ಯೆಗಳಿವೆ, ಅದರಲ್ಲಿ ಮೊದಲು ಬಗೆಹರಿಯಬೇಕಾದದ್ದು ಬಡತನ ಎಂಬುದು.
ನಮ್ಮ ಪ್ರಯಾಣ ಮುಂದುವರಿದಂತೆ ನಾವು ದಿಯೂ ದಮನ್, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಘಡ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಕ್‌ನಂತಹ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೂ ಹಾದು ಹೋದೆವು. ಇಲ್ಲೆಲ್ಲ ಸಂಸ್ಕೃತಿ, ಆಹಾರ ಶೈಲಿ, ಉಡುಪು ವಿಭಿನ್ನವಾದರೂ ರೈತರು ಮತ್ತು ಬಡಜನರ ಸಮಸ್ಯೆಗಳು ಒಂದೇ ಆಗಿದ್ದವು.
ಸಮಾಧಾನಕರ ವಿಚಾರ ಏನೆಂದರೆ ಕಳೆದ 10 ವರ್ಷಗಳಿಗೆ ಹೋಲಿಸಿಕೊಂಡರೆ ಈ ಹಳ್ಳಿಗಳಲ್ಲಿ ಒಂದಿಷ್ಟು ಸುಧಾರಣೆ ಕಂಡಿವೆ. ಶಾಲೆಗಳು ತೆರೆಯುತ್ತಿವೆ. ಹಳ್ಳಿಯ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ, ಕುಡಿಯುವ ನೀರು ಆಹಾರಕ್ಕೆ ಸಮಸ್ಯೆಯಾಗದಂತೆ ಪೂರೈಕೆ ಮಾಡಲಾಗುತ್ತಿದೆ. ಈಗ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವ ನಿರೀಕ್ಷೆಯಲ್ಲಿಯೇ ಮುಂದೆ ಸಾಗಿದೆವು.
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಎಂಬುದನ್ನು ಕೇವಲ ಪುಸ್ತಕದಲ್ಲಿ ಓದಿದ ನಮಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಭಾರತದ ಪರಿಚಯವಾಯಿತು. ವಿವಿಧ ಭಾಷೆಗಳ ಜನರು, ಅವರ ಸಂಸ್ಕೃತಿ, ಅವರ ಆಹಾರ ಪದ್ಧತಿಗಳನ್ನು ನಾವು ಸವಿದು ಅನುಭವಿಸಿದ್ದು ವರ್ಣಿಸಲಾಗದ ಅನುಭವ. ಈ ಪ್ರಯಾಣದಲ್ಲಿ ಮತ್ತೊಂದು ವಿಶೇಷವೆಂದರೆ, ಜಗತ್ತಿನ ಅತಿ ಎತ್ತರದ ಮೋಟಾರ್ ವಾಹನ ಚಾಲಾಯಿಸಬಲ್ಲ ಬೆಟ್ಟ ‘ಉಮ್‌ಲಿಂಗ್ ಲಾ ಪ್ರದೇಶವನ್ನು ನಾವು ತಲುಪಿದ್ದು.
ದಿನಕ್ಕೆ 600 ಕಿ.ಮೀ. ಎಂಬಂತೆ ಪ್ರಯಾಣಿಸಿದ ನಾವು ಮಾರ್ಗ ಮಧ್ಯದಲ್ಲಿ ಸಾಕಷ್ಟು ಕಡೆ 2-3 ದಿನಗಳ ಕಾಲ ಉಳಿದು ಅಲ್ಲಿನ ಪ್ರದೇಶಗಳನ್ನು ನೋಡಿದೆವು. ರಾಜಸ್ಥಾನದಲ್ಲಿ ದೇವಾಲಯಗಳು, ಅಮೃತ್‌ಸರ, ಗುರುದ್ವಾರ, ಲಡಾರ್, ಬೌದ್ಧ ದೇವಾಲಯಗಳು, ಭಾರತದ ಏಕತೆಯ ಸಂದೇಶ ಸಾರುವ ಲಾಲ್ ಬಹುದ್ದೂರ್ ಶಾಸ್ತ್ರಿ ಪ್ರತಿಮೆ, ವಾಘಾ ಗಡಿ ಸೇರಿದಂತೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದೆವು. ಈ ವೇಳೆ ಅಲ್ಲಿನ ಜನರೊಂದಿಗೆ ನಡೆಸಿದ ಸಂಭಾಷಣೆಗಳ ಅನುಭವ ಜೀವನದುದ್ದಕ್ಕೂ ನಮ್ಮ ನೆನಪಿನಲ್ಲಿರುತ್ತವೆ. ವಿವಿಧ ರಾಜ್ಯಗಳಲ್ಲಿ ವಿವಿಧ ಜನರೊಂದಿಗೆ ಮಾತನಾಡುತ್ತಾ ಹೋದಂತೆ ತನ್ನದೇ ಆದ ಸಮಸ್ಯೆಗಳು ತೆರೆದುಕೊಳ್ಳುತ್ತವೆ. ನಗರಗಳು ಅಭಿವೃದ್ಧಿ ಹೊಂದಿದಷ್ಟು ಹಳ್ಳಿಗಳು ಅಭಿವೃದ್ಧಿ ಹೊಂದಿದ್ದೇವೆಯೇ? ಇಲ್ಲ. ಕೆಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಗ್ರಾಮೀಣ ಪ್ರದೇಶಗಳು ಇಂದು ಅಭಿವೃದ್ಧಿ ಹಾದಿಯಲ್ಲಿವೆ. ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಒಂದಿಷ್ಟು ಹಳ್ಳಿಗಳು ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ನರಳುತ್ತಿದ್ದು, ಅವು ಸಾಕಷ್ಟು ಅಭಿವೃದ್ಧಿಯಾಗಬೇಕಿದೆ.
ಈ ಪ್ರಯಾಣದಿಂದ ಮತ್ತೊಂದೆಡೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬುದಕ್ಕೆ ಪೂರಕವಾದ ಸಾಕಷ್ಟು ವಿಚಾರಗಳು ಅನುಭವಕ್ಕೆ ಬಂದವು. ನೂರಾರು ಕಿ.ಮೀ. ಉದ್ದದ ಹೆದ್ದಾರಿಗಳು, ಅಭಿವೃದ್ಧಿ ಹೊಂದಿದ ನಗರಗಳು, ನಗರಗಳಲ್ಲಿನ ಮೂಲಸೌಕರ್ಯಗಳು, ಪ್ರವಾಸಿ ತಾಣಗಳ ಅಭಿವೃದ್ಧಿ ಬೇರೆಯ ಭಾರತವನ್ನೇ ನಮಗೆ ಪರಿಚಯಿಸಿತು. ಭಾರತದಲ್ಲಿ ಪ್ರವಾಸೋದ್ಯಮ ಬೆಳೆದಂತೆಲ್ಲ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂಬುದು ಅಲ್ಲಿ ನನಗನಿಸಿತು.
ಈ ಪ್ರಯಾಣದ ಮತ್ತೊಂದು ಅನುಭವವೆಂದರೆ ವಿವಿಧ ಹವಾಮಾನದ ಪರಿಸರದಲ್ಲಿ ನಾವು ಪ್ರಯಾಣಿಸಿದ್ದು. ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಉಷ್ಣಾಂಶದ ಅನುಭವ ಪಡೆದರೆ, ರಾಜಸ್ಥಾನದಲ್ಲಿ ಹೆಚ್ಚಿನ ಉಷ್ಣಾಂಶ ಮತ್ತು ಒಂದೆರಡು ರಾಜ್ಯಗಳಲ್ಲಿ ಮಳೆಯಲ್ಲಿಯೂ ಬೈಕ್ ಓಡಿಸಿದೆವು. ಇನ್ನು ಉಳಿದುಕೊಳ್ಳಲು ಐಶಾರಾಮಿ ರೆಸಾರ್ಟ್‌ನಿಂದ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಮಲಗಿದ್ದ ಉದಾಹರಣೆಗಳಿವೆ.
ನಮ್ಮ ಈ ದೀರ್ಘ ಪ್ರಯಾಣಕ್ಕೆ ಕುಟುಂಬದಿಂದಲೂ, ಸ್ನೇಹಿತರಿಂದಲೂ ಉತ್ತಮ ಪ್ರೋತ್ಸಾಹ ದೊರಕಿದ್ದಂತೂ ನಿಜ. ಈ ಪ್ರಯಾಣಕ್ಕಾಗಿ ನಾವು ಬಳಸಿದ ಬೈಕ್ ಅನ್ನು ಅನುಕೂಲಕ್ಕೆ ತಕ್ಕಂತೆ ಸಿದ್ದಪಡಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಬರೋಬರಿ 24-25 ದಿನಗಳಿಗಾಗುವ ಬಟ್ಟೆ, ಬೇಕಾದ ಉಪಕರಣಗಳನ್ನು ಬೈಕ್‌ನಲ್ಲಿ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು. ನಮ್ಮ ರಕ್ಷಣೆಗೆ ಅಗತ್ಯವಿರುವ ಎಲ್ಲ ಸಲಕರಣೆ ಮತ್ತು ಉಡುಪು ಧರಿಸಿರಬೇಕು. ಈ ಪ್ರಯಾಣದಿಂದ ನಮಗೆ ಬದುಕಿಗೆ ಹೊಸ ಪಾಠ ಕಲಿತಂತಾಯಿತು. ದಿನದ ಬದುಕಿಗಾಗಿ ಜನರು ಏನೆಲ್ಲ ಕಷ್ಟಗಳನ್ನು ಅನುಭವಿಸುತ್ತಾರೆ, ಗಾಳಿ, ಮಳೆ, ಚಳಿಯನ್ನೂ ಲೆಕ್ಕಿಸದೇ ಹೇಗೆ ದುಡಿಯುತ್ತಾರೆ ಎಂಬುದನ್ನು ನೋಡಿ ನಾನು ನನ್ನ ಬದುಕಿಗೆ ಅನೇಕ ಪಾಠಗಳನ್ನು ಕಲಿತೆ. ಆ ನೀತಿಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ ಎಂದು ಬಿಜೆಪಿ…
ಮಂಡ್ಯ: ರಾಷ್ಟ್ರದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.೨೦ ರಷ್ಟು ಇದ್ದು, ಶೇ.೬೦ ರಷ್ಟು ಜನರು ಕೃಷಿ ಅವಲಂಭಿಸಿದ್ದಾರೆ. ಆದ್ದರಿಂದ ರಾಷ್ರ್ಟದ…
ಕುವೈತ್/ನವದೆಹಲಿ: 26ನೇ ಅರೇಬಿಯನ್ ಗಲ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್ ದೊರೆ ಶೇಖ್ ಮಿಶಾಲ್…
371 J ಕೊಡುಗೆಯಾಗಿ 371 ಬೆಡ್ ಗಳ ಆಸ್ಪತ್ರೆ: ಸಿಎಂ ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ…
‘ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಈಗ ಒಂದು ಫ್ಯಾಶನ್ ಆಗಿಬಿಟ್ಟಿದೆ. ಹೀಗೆ ಹೇಳುವವರು ಭಗವಂತನ ಹೆಸರನ್ನಾದರೂ ಇಷ್ಟು ಬಾರಿ ಸ್ಮರಿಸಿದ್ದರೆ ಅವರಿಗೆ…
ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…