ಮೌಢ್ಯ ಮೆಟ್ಟಿನಿಂತ ವಿವಾಹಕ್ಕೀಗ ಐವತ್ತರ ಸಂಭ್ರಮ!

ನೆಂಪೆ ದೇವರಾಜ್ ತೀರ್ಥಹಳ್ಳಿ

ಈಗಲೋ ಆಗಲೋ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಾಠ ಮುಗಿಸಿ, ರೌಂಡ್ಸ್ ಕ್ಯಾಂಟೀನಿನಲ್ಲಿ ದಲಿತ, ರೈತ ಮತ್ತು ಭಾಷಾ ಚಳುವಳಿಗಳ ಬಗ್ಗೆ ಚರ್ಚೆ ನಡೆಸಿ ಇದೀಗ ತಾನೆ ಬಂದಿದ್ದಾರೆ ಎಂಬ ಭಾವಕ್ಕೆ ಒಂಚೂರೂ ಕೊರತೆಯಾಗದಂತೆ ನಿವೃತ್ತಿಯಾಗಿ ಹದಿನೈದು ವರ್ಷಗಳ ನಂತರವೂ ಕಾಣಿಸುತ್ತಾರೆ. ಇವರಿಂದ ಪ್ರಭಾವಿತರಾದ ಅನೇಕ ಇವರ ಶಿಷ್ಯರು ಇವರ ತಾಜಾತನಕ್ಕಾಗಿ, ಫಳ ಫಳನೆ ಹೊಳೆವ ಲವಲವಿಕೆಗಾಗಿ ಹೊಟ್ಟೆಯುರಿಸಿಕೊಳ್ಳುವುದಂತೂ ಇದ್ದೇ ಇದೆ ಬಿಡಿ. ಸುತ್ತಾಡದ ನೆಲವಿಲ್ಲ, ಮಾತಾಡದ ಜನರಿಲ್ಲವೆಂಬಂತೆ ಕರ್ನಾಟಕವನ್ನು ಸುತ್ತುತ್ತಲೆ ತಲೆ ತುಂಬ ವಿಚಾರಗಳನ್ನು ಹೊತ್ತು ಜಾತಿ ರಹಿತ ಸಮಾಜವೊಂದನ್ನು ಕಟ್ಟುವಲ್ಲಿ ಈ ಐವತ್ತರವತ್ತು ವರುಷಗಳಲ್ಲಿ ಸೋತದ್ದರ ಬಗ್ಗೆ ಕ್ಷೋಭೆಗೊಳ್ಳುತ್ತಾರೆ.

ಅಷ್ಟೋ ಇಷ್ಟೋ ಉಳಿಸಿ ಕೊಂಡಿದ್ದ ಆರೋಗ್ಯವಂತ ಸಮಾಜವೆಂಬುದು ವರ್ತಮಾನದಲ್ಲಿ ಪೂರಾ ದಿಕ್ಕೆಡಲು ಕಾರಣವಾಗುತ್ತಿರುವುದರ ಬಗ್ಗೆ ಮಮ್ಮಲ ಮರುಗುತ್ತಾರೆ. ಮನುಷ್ಯ ಮನುಷ್ಯರ ನಡುವೆ , ಜಾತಿ ಧರ್ಮಗಳ ನಡುವೆ ಅಸಹನೆ ಎಂಬುದು ಅರ್ಬುದವಾಗಿ ಯುವ ಮನಸ್ಸುಗಳನ್ನು ಹಾಳು ಮಾಡುತ್ತಿರುವ ಬಗ್ಗೆ ಮತ್ತೆ ಮತ್ತೆ ಮಾತಾಡಿ ಸುಸ್ತಾಗಿ ರಾತ್ರಿ ಕಳೆಯುತ್ತಾರೆ. ಆದರೆ ಮಾರನೆಯ ಬೆಳಿಗ್ಗೆ ತಮ್ಮ ವಯಸ್ಸನ್ನು ಮರೆತು ಮತ್ತೆ ಹೊಸದಾಗಿಯೋ ಎಂಬಂತೆ, ಹೊಸ ಹೊಸಬರೆನ್ನುವಂತೆ ಮಾತಾಡಿ ಭರವಸೆ ತುಂಬುತ್ತಾರೆ.

ತಾವು ಬರೆದ ಹತ್ತಾರು ಕೃತಿಗಳ ಬಗ್ಗೆಯಾಗಿ, ಎರಡು ಬಾರಿ ಪಡೆದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಗ್ಗೆಯಾಗಿ, ಜಾನಪದದಲ್ಲಿ ತಾವು ನಡೆಸಿದ ಅರ್ಥಪೂರ್ಣ ಸಂಶೋದನೆಗಳ ಕುರಿತಾಗಿ, ಇವರೆಂದೂ ಮಾತಾಡಿದವರಲ್ಲ..ಇವೆಲ್ಲ ತನಗೆ ಮುಖ್ಯವಲ್ಲವೆಂಬಂತೆ ಇರಬಲ್ಲರು ಕೂಡಾ! ಆದರೆ ತಮ್ಮ ಸುತ್ತಾಟದ ಮೂಲಕ ಕರ್ನಾಟಕವನ್ನು ಗ್ರಹಿಸಿದ ಬಗೆಗಾಗಿ, ಜನಪರ ಚಳುವಳಿಗಳನ್ನು ಅಧ್ಯಯನಿಸಿದ ವಿಶಿಷ್ಟತೆಗಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪಕ ಸಂಚಾಲಕರಾಗಿ ಅದನ್ನು ಸಂಚಲನಗೊಳಿಸಿದ್ದಕ್ಕಾಗಿ ಇವರಂತೆ ನಮಗೂ ಮುಖ್ಯರಾಗುತ್ತಾ ಹೋಗುತ್ತಾರೆ.

ಸಮಾಜವಾದವೆಂಬುದನ್ನು ಅತ್ಯಂತ ಜತನದಿಂದ ತಮ್ಮ ಹೃದಯದೊಳಗೆ ಇರಿಸಿಕೊಂಡಿದ್ದಾರೆ. ಹೇಗೆಂದರೆ ಕರ್ನಾಟಕದ ಯಾವುದೇ ಸಮಾಜವಾದಿಗಳು ಅಧಿಕಾರ ಅನುಭವಿಸಲು ಹತ್ತಿರ ಬಂದಾಗೆಲ್ಲ ನಾಡಿಗೆ ಬಹುದೊಡ್ಡ ಸಮ ಸಮಾಜವೊಂದರ ಕೊಡುಗೆ ಇವರಿಂದ ಹರಿಯಬರುತ್ತದೆಂದು ಆಶಾವಾದಿಗಳಾಗುತ್ತಾರೆ. ಹತಾಶೆ ತರಿಸುವಂತೆ ಅಧಿಕಾರಸ್ಥ ಸಮಾಜವಾದಿಗಳ ನಡವಳಿಕೆಗಳು ಹೊರ ಬರತೊಡಗಿದಾಗಲೂ ಇವರುಗಳ ಬಗ್ಗೆ ಅಪಸ್ವರ ಎತ್ತದಂತೆ ತಮ್ಮನ್ನು ತಾವೇ ನೋಡಿಕೊಳ್ಳುತ್ತಾರೆ.

ಶಾಂತವೇರಿ ಗೋಪಾಲ ಗೌಡರ ನೆನಪಿನ ಸಂಪುಟವನ್ನು ಹೊರತರಲು ಇವರು ತೆಗೆದುಕೊಂಡ ಶ್ರಮ ಅಪೂರ್ವವಾದುದು. ತೀರ್ಥಹಳ್ಳಿ ಸಾಗರ ಪ್ರಾಂತ್ಯಗಳಲ್ಲಿ ಶಾಂತವೇರಿ ಗೋಪಾಲಗೌಡರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಂಪುಟದ ಇನ್ನೋರ್ವ ಲೇಖಕ ಜಿ.ವಿ. ಆನಂದಮೂರ್ತಿಯವರೊಂದಿಗೆ ಸೇರಿ ಗೋಪಾಲಗೌಡರ ಎಲ್ಲ ಸಹವರ್ತಿಗಳು ಹಾಗೂ ಶಿಷ್ಯವೃಂದವನ್ನು ಮಾತಾಡಿಸುತ್ತಲೆ ಭೂ ಸುಧಾರಣಾ ಕಾಯ್ದೆ ಬಂದ ನಂತರದ ಬದಲಾದ ಮಲೆನಾಡಿನ ಸಾಂಸ್ಕೃತಿಕ ಜಗತ್ತನ್ನು ಗ್ರಹಿಸಿ ಹೊರಗೆಡವುತ್ತಾರೆ.

ಇಷ್ಟೆಲ್ಲ ಪರಿಚಯವನ್ನು ಈ ಸಂದರ್ಭದಲ್ಲಿ ಮಾಡಲು ಕಾರಣವೂ ಇದೆ. ಇಂದಿಗೆ ಐವತ್ತು ವರ್ಷಗಳ ಹಿಂದೆ ಕಾಳೇಗೌಡರೆಂಬೀ ವ್ಯಕ್ತಿ ಚನ್ನಪಟ್ಟಣ ತಾಲೂಕಿನ ನಾಗವಾರದಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡುತ್ತಾರೆ. ನೂರಾರು ಹಳ್ಳಿಗರ ಸಮ್ಮುಖದಲ್ಲಿ ಇವರು ಮದುವೆಯಾದ ರೀತಿಯಿಂದ ಕನ್ನಡ ನಾಡಿನ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯದಲ್ಲಿ ಮೈ ನವಿರೇಳಿಸುವ ಸಂಚಲನವೊಂದನ್ನು ಸೃಷ್ಟಿಸುತ್ತಾರೆ. ಕೊಡಗಿನ ಕಾವೇರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ಆದ ಈ ಮದುವೆ ಎಲ್ಲ ಸಾಮಾಜಿಕ ಹಾಗೂ ದಾರ್ಮಿಕ ಕಟ್ಟುಪಾಡುಗಳಿಗೆ ತುಳಸಿ ನೀರು ಬಿಟ್ಟ ಕಾರಣಕ್ಕಾಗಿ ನಮಗೆಲ್ಲ ಮುಖ್ಯವಾಗುತ್ತದೆ. ತಮ್ಮೂರಿನ ಅಕ್ಕಪಕ್ಕದ ಹತ್ತಾರು ಹಳ್ಲಿಗರು ಮದುವೆಗೆ ಯಾವುದೇ ಪ್ರತಿರೋಧವನ್ನೂ ವ್ಯಕ್ತಪಡಿಸದೆ ತಮ್ಮ ಮನೆಯದೆ ಒಂದು ಕಾರ್ಯಕ್ರಮವೆಂಬಂತೆ ಒಳಗೊಳ್ಳುತ್ತಾರೆ.

ಸಾವಿರದ ಒಂಬೈನೂರ ಎಪ್ಪತ್ತರಡನೇ ಇಸವಿಯ ಜೂನ್ ತಿಂಗಳ ಎಂಟರಂದು ಅಬ್ಬೂರಿನ ಕೆಂಪಮ್ಮನವರ ಕೈ ಹಿಡಿವಾಗ ಕಾಳೇಗೌಡರೆಂದರೆ ಬೆಂಕಿ ಚೆಂಡು. ಅನ್ಯಾಯ ಅಸಮಾನತೆಯ ವಿರುದ್ದ ಗೌಡರು ಗುಡುಗಿದರೆಂದರೆ ವಿಧಾನ ಸೌಧವನ್ನು ನಡುಗಿಸುವ ತಾಕತ್ತುಳ್ಳವರಾಗಿದ್ದರು. ಈ ಕಾರಣಕ್ಕೇ ಕಾಳೇಗೌಡರ ಮದುವೆಗೆ ಅಂದು ಸಚಿವರಾಗಿದ್ದ ಎಸ್.ಎಂ ಕೃಷ್ಣ ,ಪದೆಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ,ಕೆ ಹೆಚ್ ರಂಗನಾಥ್ರಂತಹ ಅತಿರಥ ಮಹಾರಥರು ಆಗಮಿಸುತ್ತಾರೆ. ಎಂ ಮಲ್ಲಿಕಾರ್ಜುನ ಸ್ವಾಮಿ ಎಂಬ ಸಚಿವರು ಮೂಢ ನಂಬಿಕೆಗಳು ಮತ್ತು ಸಂಪ್ರದಾಯ ಎಂಬ ವಿಷಯದ ಕುರಿತು ಮಾತನಾಡುತ್ತಾರೆ. ಮಂಚಯ್ಯ ಎಂಬ ದಲಿತ ವ್ಯಕ್ತಿ ಮಂತ್ರಮಾಂಗಲ್ಯ ಸೂತ್ರಗಳನ್ನು ಬೋಧಿಸುತ್ತಾರೆ.

ಅರೆ? ಇದೆಲ್ಲ ಆ ಕಾಲದಲ್ಲೂ ನಡೆಯುತ್ತಿತ್ತೆ? ಮನೆಯವರನ್ನು ಮಾತ್ರವಲ್ಲ ಇಡೀ ಊರನ್ನೆ ಒಪ್ಪಿಸಿ ಪ್ರಭಾವಿಸಿದ್ದು ಮಾತ್ರವಲ್ಲ ಈ ಮೂಲಕ ವಿವಾಹದ ವಿಚಾರದಲ್ಲಿ ಬಹುದೊಡ್ಡ ಚಳುವಳಿ ತದ ನಂತರದಲ್ಲಿ ನಡೆಯುವುದಕ್ಕೆ ಕಾಳೇಗೌಡರು ನಾಂದಿ ಹಾಡಿದರೆಂದರೆ ತಪ್ಪಾಗಲಾರದು. ಆ ನಂತರ ಎಂಭತ್ತರ ದಶಕದಲ್ಲಿ ಒಡಮೂಡಿದ ರೈತ ಚಳುವಳಿಯ ಸಾರಥ್ಯದಲ್ಲಿ ಚನ್ನ ಪಟ್ಟಣ ಮತ್ತು ಮಂಡ್ಯ ಸುತ್ತ ಮುತ್ತ ಸಾವಿರಾರು ಸಂಖ್ಯೆಯಲ್ಲಿ ಮಂತ್ರ ಮಾಂಗಲ್ಯ ಸರಳ ವಿವಾಹ ನಡೆಯುವಲ್ಲಿ ನಾಗವಾರರು ಅಂದು ತೆಗೆದುಕೊಂಡ ತೀರ್ಮಾನ ಪ್ರಭಾವ ಬೀರಿದ್ದನ್ನು ಮರೆಯಲು ಸಾಧ್ಯವಿಲ್ಲ.

ನಾಗವಾರರ ಅಂದಿನ ಮದುವೆ ನಾಗವಾರರಿಗೇ ಗೊತ್ತಿಲ್ಲದಂತೆ ತಣ್ಣನೆಯ ಬದಲಾವಣೆಯೊಂದಕ್ಕೆ ಕಾರಣವಾಗಿತ್ತು ಎಂಬ ಮಾತು ಇನ್ನೂ ಹಸಿ ಹಸಿಯಾಗಿಯೇ ಕೇಳಿಸುವಂತದ್ದು.

ಗಂಗೋತ್ರಿಯ ರೌಂಡ್ಸ್ ಕ್ಯಾಂಟೀನ್ ಗೆ ಕಾಳೇಗೌಡರು ಹೋಗುವುದನ್ನೆ ಕಾಯುತ್ತಿದ್ದ ಮೊಗಳ್ಳಿ ಗಣೇಶ್, ನಾನು ಮತ್ತು ಶಿವಾನಂದ ಕರ್ಕಿ ಕಾಳೇಗೌಡರು ಕರೆಯಲಿ ಬಿಡಲಿ ಅವರ ಹಿಂದೆ ಹೋಗುವುದು ಮಾಮೂಲಿಯಾಗಿತ್ತು. ನಮಗೆ ಹೊಟ್ಟೆ ತುಂಬ ತಿಂಡಿ ಕೊಡಿಸುತ್ತಿದ್ದ ಕಾಳೆಗೌಡರಿಗೀಗ ಬರೋಬ್ಬರಿ ಎಪ್ಪತ್‌ತೈದು ವರ್ಷ. ತಮಗೆ ಇಪ್ಪತ್‌ತೈದು ವರ್ಷಗಳಾದಾಗ ಕೆಂಪಮ್ಮನವರನ್ನು ಕೈಹಿಡಿದು ಇಂದಿಗೆ ಐವತ್ತು ವರುಷಗಳಾಗಿವೆ. ಬೆಟ್ಟ ಸಾಲು ಮಳೆಯಲ್ಲಿ ಅಲೆಗಳ ವಿರುದ್ದ ಈಜಿದ ನಾಗವಾರರ ಅಪಾರ ಶಿಷ್ಯ ವೃಂದ ನಾಡಿನ ತುಂಬ ಹರಡಿದೆ. ಸದಾ ಮೋಹಗೊಳಿಸುವ ನಗುವಿಗೆ ಮತ್ತಷ್ಟು ಅರ ಹಾಕಿ ಆಕರ್ಷಿಸುವ ಪರಿಯ ಹಿಂದಿನ ರಹಸ್ಯವೇನೆಂಬ ಪ್ರಶ್ನೆ ಇವರಿಗೆ ಹಲವು ಬಾರಿ ಎದುರಾಗಿದೆ. ಅದೇ ನಗುವನ್ನೆ ಮತ್ತಷ್ಟು ಅಗಲಗೊಳಿಸಿ ಸುಮ್ಮನಾಗಿದ್ದಾರೆ .

ಸಮಾಜವಾದದ ಬೇರುಗಳಿಗೆ ನೀರು ಗೊಬ್ಬರ ಹಾಕಿ ಬೆಳೆಸೋಣವೆಂಬ ಉತ್ಸಾಹ ಅವರ ವಯಸ್ಸನ್ನು ಬದಿಗೊತ್ತಿ ಮುನ್ನಡೆಸುತ್ತಿದೆ. ಮೌಢ್ಯ ಕಂದಾಚಾರಗಳ ಮೂಲಕ ಹೆಬ್ಬಾವಿನ ಗಿರಕಿಯಲ್ಲಿ ನವ ಸಾಕ್ಷರ ಶೂದ್ರ ವರ್ಗ ಪ್ರತಿ ಮೂಳೆಯನ್ನೂ ಮುರಿಸಿಕೊಳ್ಳುತ್ತಿರುವ ಬಗ್ಗೆ ಇವರ ಮಾತಲ್ಲಿ ಅಪಾರ ನೋವಿದೆ. ನಗುವಲ್ಲಿ ಭರವಸೆಗಳಿವೆ. ದ್ವನಿಯಲ್ಲಿ ಖಡಕ್ ತನವಿದೆ. ಐವತ್ತು ವರುಷಗಳ ಹಿಂದಿನ ತಮ್ಮ ಮದುವೆಯನ್ನು ಮಂಚಯ್ಯ ಎಂಬ ದಲಿತ ವ್ಯಕ್ತಿಯಿಂದ ಮಾಡಿಸಿಕೊಂಡ ಕಾಳೇಗೌಡರ ನಂತರದ ಪೀಳಿಗೆ ಕನಿಷ್ಟ ಮಂತ್ರ ಮಾಂಗಲ್ಯ ಸರಳ ವಿವಾಹ ಆಗುವುದಕ್ಕೂ ಹೆಣ್ಣಿನ ಕಡೆಯವರು ಒಪ್ಪತ್ತಿಲ್ಲವೆಂದೋ ಅಪ್ಪನ ಅಜ್ಜನಿಗೆ ಇಷ್ಟವಿರಲಿಲ್ಲವೆಂಬ ಸಬೂಬನ್ನು ಮೆರೆದೋ ಮೌಢ್ಯದ ಉರುಳಿಗೆ ಕುತ್ತಿಗೆ ಚಾಚುಚುವುದನ್ನು ನೋಡಿದರೆ ಅಯ್ಯೋ ಅನಿಸದಿರದು. ಈ ಎಪ್ಪತ್‌ತೈದರಲ್ಲಿ ಗೌಡರ ಬಗೆಗಿನ ನೆನಪುಗಳು ಒಂದೊಂದಾಗಿ ಅವರ ಸಹವರ್ತಿಗಳು ಹಾಗೂ ಶಿಷ್ಯ ಬಳಗದಿಂದ ಹೊರಬರಲಿ.

 

andolana

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

9 mins ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

1 hour ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

2 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

2 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

2 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

3 hours ago