ಅಂಕಣಗಳು

ಕರ್ನಾಟಕದ ರಾಜಕಾರಣದಲ್ಲಿ ೧೯೯೨ರ ವಿದ್ಯಮಾನ ಮರುಕಳಿಸಲಿದೆಯೇ?

ಬೆಂಗಳೂರು ಡೈರಿ 

ಮೂವತ್ಮೂರು ವರ್ಷಗಳ ಹಿಂದೆ ಕರ್ನಾಟಕದ ರಾಜಕಾರಣದಲ್ಲಿ ನಡೆದ ಆ ವಿಸ್ಮಯ ಮತ್ತೆ ಮರುಕಳಿಸಲಿದೆಯೇ? ಇಂತಹದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾಜ್ಯ ರಾಜಕಾರಣವನ್ನು ಗಮನಿಸಿದರೆ ಅದು ಅಸಾಧ್ಯ ಅನ್ನಿಸುತ್ತದೆ. ಅಂದ ಹಾಗೆ ಮೂವತ್ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದ ಒಬ್ಬ ನಾಯಕ ಜಾತಿ ಬಲ, ಹಣ ಬಲ ಮತ್ತು ಶಾಸಕರ ಬಲವಿಲ್ಲದೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು.ಅವರ ಹೆಸರು ಎಂ.ವೀರಪ್ಪ ಮೊಯ್ಲಿ.

೧೯೯೦ರಲ್ಲಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪ ಎರಡು ವರ್ಷಗಳಲ್ಲಿ, ಅಂದರೆ ೧೯೯೨ರಲ್ಲಿ ಪದಚ್ಯುತರಾಗುವ ಕಾಲಕ್ಕೆ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಎಸ್.ಎಂ.ಕೃಷ್ಣ ಅವರು ಮುಂದಿನ ಮುಖ್ಯಮಂತ್ರಿಯಾಗುವುದು ಬಹುತೇಕ ನಿಶ್ಚಿತವಾಗಿತ್ತು. ಇದಕ್ಕೆ ಶಾಸಕಾಂಗ ಪಕ್ಷದಲ್ಲಿ ಎಸ್.ಎಂ.ಕೃಷ್ಣ ಅವರಿಗಿದ್ದ ಬಲವೇ ಮುಖ್ಯ ಕಾರಣ. ಅವತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಕೃಷ್ಣ ಅವರ ಬಲ ಎಷ್ಟಿತ್ತೆಂದರೆ ಸಿಎಂ ಹುದ್ದೆಯ ರೇಸಿನಲ್ಲಿದ್ದ ಉಳಿದವರು ಅವರ ಸಮೀಪದಲ್ಲೂ ಇರಲಿಲ್ಲ.

ಇದೇ ರೀತಿ ಕೃಷ್ಣ ಅವರಿಗೆ ಪ್ರಬಲ ಒಕ್ಕಲಿಗ ಸಮುದಾಯದ ಹಿನ್ನೆಲೆ ಇತ್ತು. ಅದೇ ರೀತಿ ಇವತ್ತಿನ ರಾಜಕಾರಣಕ್ಕೆ ಅನಿವಾರ್ಯವಾದ ಸಂಪನ್ಮೂಲ ಸಂಗ್ರಹದ ಶಕ್ತಿಯಿತ್ತು. ಅರ್ಥಾತ್, ಅವರಿಗೆ ಜಾತಿ ಬಲ, ಹಣ ಬಲ ಮತ್ತು ಶಾಸಕರ ಬಲಗಳೆಲ್ಲವೂ ಇದ್ದವು. ಆದರೆ ಮುಖ್ಯಮಂತ್ರಿ ಆಯ್ಕೆಯ ದಿನ ನಿಗದಿಯಾದಾಗ ಪವಾಡ ಘಟಿಸಿತು. ಅದೆಂದರೆ ಜಾತಿ, ಹಣ, ಶಾಸಕ ಬಲಗಳನ್ನು ಹೊಂದಿದ್ದ ಕೃಷ್ಣ ಅವರನ್ನು ಈ ಮೂರು ಬಲಗಳಿಲ್ಲದ ವೀರಪ್ಪ ಮೊಯ್ಲಿ ಹಿಂದೆ ಸರಿಸಿ ಅಧಿಕಾರದ ಗದ್ದುಗೆಗೇರಿದ್ದರು. ಗಮನಿಸುತ್ತಾ ಹೋದರೆ ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದಲ್ಲಿ ಇಂತಹದೊಂದು ವಿದ್ಯಮಾನ ಘಟಿಸಿರಲಿಲ್ಲ.

೧೯೪೭ರ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಜವಾಬ್ದಾರಿ ಸರ್ಕಾರದಲ್ಲಿ ಸಿಎಂ ಅದ ಕೆ.ಸಿ.ರೆಡ್ಡಿ ಅವರಿಗೆ ಜಾತಿಯ ಬಲವಿತ್ತು. ೧೯೫೨ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಸಿಎಂ ಆದ ಕೆಂಗಲ್ ಹನುಮಂತಯ್ಯನವರಿಗೆ ಪ್ರಬಲ ಒಕ್ಕಲಿಗ ಸಮುದಾಯದ ಹಿನ್ನೆಲೆ ಇತ್ತು.

ಹೀಗೆಯೇ ನೋಡುತ್ತಾ ಹೋದರೆ ರಾಜ್ಯ ರಾಜಕಾರಣದಲ್ಲಿ ಸಿಎಂ ಅದ ಎಲ್ಲರಿಗೂ ಜಾತಿ, ಹಣ ಮತ್ತು ಶಾಸಕರ ಬಲದ ಪೈಕಿ ಒಂದು ಬಲವಾದರೂ ಇತ್ತು. ೧೯೫೬ರಲ್ಲಿ ಕೆಂಗಲ್ ಹನುಮಂತಯ್ಯನವರ ಪದಚ್ಯುತಿಯ ನಂತರ ಸಿಎಂ ಅದ ಕಡಿದಾಳ್ ಮಂಜಪ್ಪನವರಿಗೆ ಪ್ರಬಲ ಒಕ್ಕಲಿಗ ಸಮುದಾಯದ ಹಿನ್ನೆಲೆ ಇತ್ತು. ಅವರ ನಂತರ ಬಂದ ಎಸ್. ನಿಜಲಿಂಗಪ್ಪವರಿಗೆ, ಬಿ.ಡಿ.ಜತ್ತಿಯವರಿಗೆ ಲಿಂಗಾಯತ ಬಲವಿತ್ತು. ೧೯೬೨ರಲ್ಲಿ ಸಿಎಂ ಕ್ಯಾಂಡಿಡೇಟ್ ಅಗಿದ್ದ ನಿಜಲಿಂಗಪ್ಪ ಅವರು ಚುನಾವಣೆಯಲ್ಲಿ ಸೋತಾಗ, ಅವರ ಬಣ ತಂದು ಕೂರಿಸಿದ ಎಸ್.ಅರ್.ಕಂಠಿ ಆಕಸ್ಮಿಕ ಮುಖ್ಯಮಂತ್ರಿಗಳ ಸಾಲಿಗೆ ಸೇರುತ್ತಾದರೂ ಅವರಿಗೆ ಪ್ರಬಲ ಲಿಂಗಾಯತ ಸಮುದಾಯದ ಹಿನ್ನೆಲೆ ಇತ್ತು.

ಮುಂದೆ ವೀರೇಂದ್ರ ಪಾಟೀಲರಾಗಲೀ, ಇಂದಿರಾ ಗಾಂಧಿ ಬೆಂಬಲದೊಂದಿಗೆ ೧೯೭೨ರಲ್ಲಿ ಸಿಎಂ ಅದ ದೇವರಾಜ ಅರಸುರವರಿಗೆ ಮೂರು ಬಲಗಳ ಪೈಕಿ ಒಂದೆರಡು ಬಲಗಳಾದರೂ ಇದ್ದವು. ೧೯೮೦ರಲ್ಲಿ ದೇವರಾಜ ಅರಸುರವರ ಪದಚ್ಯುತಿಯ ನಂತರ ಸಿಎಂ ಆದ ಆರ್. ಗುಂಡೂರಾವ್‌ರಿಗೆ ಮೇಲ್ವರ್ಗದ ಹಿನ್ನೆಲೆ ಇತ್ತು.೧೯೮೩ರಲ್ಲಿ ಅಧಿಕಾರಕ್ಕೆ ಬಂದ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರದ ಚುಕ್ಕಾಣಿ ಹಿಡಿದ ರಾಮಕೃಷ್ಣ ಹೆಗಡೆ ಆಕಸ್ಮಿಕ ಮುಖ್ಯಮಂತ್ರಿಯಾದರೂ ಅವರು ಜನತಾ ರಂಗದ ಬಹುತೇಕ ಶಾಸಕರ ವಿಶ್ವಾಸ ಗಳಿಸಿದ್ದರು.

ಸಂಪನ್ಮೂಲ ಸಂಗ್ರಹಿಸುವ ಶಕ್ತಿಯೊಂದಿಗೆ ಮೇಲ್ವರ್ಗದ ಹಿನ್ನೆಲೆಯೂ ಅವರಿಗಿತ್ತು.  ಮುಂದೆ ಅವರು ಅಧಿಕಾರದಿಂದ ಕೆಳಗಿಳಿದಾಗ ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ ಮತ್ತು ರಾಚಯ್ಯನವರ ನಡುವೆ ಸ್ಪರ್ಧೆ ಇದ್ದರೂ ಹೆಗಡೆಯವರ ಬೆಂಬಲಿಗರು ಲಿಂಗಾಯತ ಸಮುದಾಯದ ಹಿನ್ನೆಲೆ ಇದ್ದ ಬೊಮ್ಮಾಯಿ ಅವರನ್ನು ಗೆಲ್ಲಿಸಿ ಪಟ್ಟಕ್ಕೇರಿಸಿದರು. ೧೯೮೯ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ವೀರೇಂದ್ರ ಪಾಟೀಲರ ಕೈ ಸೇರಿದ್ದಕ್ಕೆ ಜಾತಿ ಬಲ ಕಾರಣ.

ಮರುವರ್ಷ ಅವರ ಪದಚ್ಯುತಿಯಾದಾಗ ಶಾಸಕರ ಬಲವಿದ್ದ ಕೆ. ಹೆಚ್.ಪಾಟೀಲ್ ಸಿಎಂ ಆಗಬೇಕಿತ್ತಾದರೂ, ದಿಲ್ಲಿ ಗದ್ದುಗೆಯಿಂದ ಕೆಳಗಿಳಿದಿದ್ದ ಕಾಂಗ್ರೆಸ್ಸಿಗೆ ಸಂಪನ್ಮೂಲ ಕ್ರೋಢೀಕರಿಸುವ ನಾಯಕ ಬೇಕಿತ್ತು. ಬಂಗಾರಪ್ಪ ಅವರು ಸಿಎಂ ಆಗಿದ್ದು ಹೀಗೆ. ಆದರೆ ೯೨ರ ವೇಳೆಗೆ ಪ್ರಧಾನಿ ಪಿ.ವಿ.ನರಸಿಂಹರಾವ್‌ರ ಅಸಮಾಧಾನಕ್ಕೆ ಗುರಿಯಾದ ಬಂಗಾರಪ್ಪ ಅಧಿಕಾರದಿಂದ ಕೆಳಗಿಳಿಯುವುದು ಖಚಿತವಾದಾಗ ಸಿಎಂ ಹುದ್ದೆಯ ರೇಸಿನಲ್ಲಿ ಎಸ್. ಎಂ.ಕೃಷ್ಣ ಎಲ್ಲರಿಗಿಂತ ಮುಂದಿದ್ದರು. ಅವರಿಗೆ ಜಾತಿ ಬಲ, ಶಾಸಕರ ಬಲದ ಜತೆ ಸಂಪನ್ಮೂಲ ಕ್ರೋಢೀಕರಿಸುವ ಶಕ್ತಿಯೂ ಇತ್ತು. ಆದರೆ ಈ ಸಂದರ್ಭದಲ್ಲಿ ತಮಿಳುನಾಡಿನ ಮರಗತಂ ಚಂದ್ರಶೇಖರ್ ಮತ್ತು ಕೇರಳದ ಕೆ. ಕರುಣಾಕರನ್ ಅವರ ಮೂಲಕ ನರಸಿಂಹರಾವ್‌ರ ಮೇಲೆ ಪ್ರಭಾವ ಬೀರಿದ ಎಂ.ವೀರಪ್ಪ ಮೊಯ್ಲಿ ಸಿಎಂ ಹುದ್ದೆಗೆ ಬಂದು ಕುಳಿತರು. ಅವತ್ತು ಸಿಎಂ ಆದ ವೀರಪ್ಪ ಮೊಯ್ಲಿ ಅವರಿಗೆ ಜಾತಿ ಬಲವಿರಲಿಲ್ಲ. ಅವರು ಪ್ರತಿನಿಧಿಸುತ್ತಿದ್ದ ಸಣ್ಣ ಸಮುದಾಯ ಏನಿತ್ತು, ಅದು ರಾಜ್ಯದ ಯಾವ ಕ್ಷೇತ್ರಗಳಲ್ಲೂ ನಿರ್ಣಾಯಕ ಎನ್ನಬಹುದಾದ ಬಲ ಹೊಂದಿರಲಿಲ್ಲ. ಇದೇ ರೀತಿ ಅಷ್ಟು ದೊಡ್ಡ ಗಾತ್ರದ ಶಾಸಕಾಂಗದಲ್ಲಿ ಮೊಯ್ಲಿಯವರಿಗೆ ಬಹುಮತವೂ ಇರಲಿಲ್ಲ.

ಹೋಗಲಿ, ಅವರ ಹಿಂದೆ ಹಣಬಲದ ಶಕ್ತಿಗಳು ಇದ್ದವಾ ಎಂದರೆ ಅದೂ ಇರಲಿಲ್ಲ. ಒಬ್ಬ ಮುಖ್ಯಮಂತ್ರಿ ಸುಮ್ಮನೆ ಕುಳಿತರೂ ಹರಿದು ಬರುವ ಸಂಪನ್ಮೂಲವನ್ನು ಬಿಟ್ಟರೆ ಮದ್ಯದ ದೊರೆಗಳಾಗಲೀ, ಕ್ಯಾಪಿಟೇಶನ್ ಮಾಫಿಯಾ ಆಗಲಿ ಅವರ ಜತೆ ಇರಲಿಲ್ಲ.  ಆದರೂ ತಮಗೆ ಸಿಕ್ಕ ಅವಕಾಶದಲ್ಲಿ ಅವರು ಕರ್ನಾಟಕ ಐಟಿ ಕ್ರಾಂತಿಗೆ ಅಣಿಯಾಗುವಂತೆ ಮಾಡಿದರು. ಹಾಗೆಯೇ ಬಡ-ಮಧ್ಯಮ ವರ್ಗದ ಮಕ್ಕಳು ಕಡಿಮೆ ವೆಚ್ಚದಲ್ಲಿ ಉನ್ನತ ವ್ಯಾಸಂಗ ಮಾಡಲು ಸಿಇಟಿ ಎಂಬ ಮಂತ್ರದಂಡವನ್ನು ಪ್ರಯೋಗಿಸಿದರು. ಇವತ್ತು ಕರ್ನಾಟಕ ದೇಶದ ಪ್ರಬಲ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದರೆ, ಅದರಲ್ಲಿ ವೀರಪ್ಪ ಮೊಯ್ಲಿ ಅವರ ಪಾತ್ರ ದೊಡ್ಡದು. ಆದರೆ ಅವರು ಮುಖ್ಯಮಂತ್ರಿಯಾಗಿದ್ದೇ ಕಡೆ. ಅನಂತರ ಕರ್ನಾಟಕದ ನೆಲದಲ್ಲಿ ಜಾತಿ, ಹಣ, ಶಾಸಕ ಬಲವಿಲ್ಲದ ಒಬ್ಬೇ ಒಬ್ಬ ನಾಯಕ ಮುಖ್ಯಮಂತ್ರಿ ಹುದ್ದೆಗೇರಿಲ್ಲ. ಅರ್ಥಾತ್, ಈ ಮೂರೂ ಶಕ್ತಿಗಳ ಪೈಕಿ ಕನಿಷ್ಠ ಒಂದು ಶಕ್ತಿಯನ್ನೂ ಹೊಂದಿರದ ಒಬ್ಬೇ ಒಬ್ಬ ನಾಯಕ ಪಟ್ಟದ ಮೇಲೆ ಕುಳಿತಿಲ್ಲ.

೧೯೯೪ರಲ್ಲಿ ಅಧಿಕಾರಕ್ಕೆ ಬಂದ ದೇವೇಗೌಡರಿಗೆ, ೯೬ರಲ್ಲಿ ಮುಖ್ಯಮಂತ್ರಿಯಾದ ಜೆ.ಹೆಚ್.ಪಟೇಲರಿಗೆ, ೯೯ರಲ್ಲಿ ಗದ್ದುಗೆಗೇರಿ ಕುಳಿತ ಎಸ್.ಎಂ.ಕೃಷ್ಣ ಅವರಿಗೆ ಇಂತಹ ಶಕ್ತಿಗಳೆಲ್ಲ ಧಾರಾಳವಾಗಿ ಇದ್ದವು. ೨೦೦೪ರಲ್ಲಿ ಕಾಂಗ್ರೆಸ್- ಜಾ.ದಳ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿಎಂ ಆದ ಎನ್. ಧರಂಸಿಂಗ್ ಅವರಿಗೆ ಜಾತಿ, ಶಾಸಕ ಬಲ ಇಲ್ಲವಾದರೂ ಅವನ್ನು ಹೊಂದಿದ್ದ ದೇವೇಗೌಡರ ಕೃಪೆ ಇತ್ತು. ಹಾಗೆಯೇ ಮಿತ್ರಕೂಟವನ್ನು ಸಂಬಾಳಿಸುವ ಸಂಪನ್ಮೂಲ ಕ್ರೋಢೀಕರಣದ ಶಕ್ತಿ ಸಿಂಗ್ ಅವರಿಗಿತ್ತು. ಆನಂತರ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ಜಾತಿ, ಶಾಸಕ ಬಲದ ಜತೆ ಸಂಪನ್ಮೂಲ ಕ್ರೋಢೀಕರಣದ ಶಕ್ತಿ ಇತ್ತು.

ಈ ಮಧ್ಯೆ ಆಕಸ್ಮಿಕವಾಗಿ ಸಿಎಂ ಪಟ್ಟಕ್ಕೇರಿದ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕರ ಬಲವಿಲ್ಲದಿದ್ದರೂ ಅದನ್ನು ಹೊಂದಿದ್ದ ಯಡಿಯೂರಪ್ಪನವರ ಬೆಂಬಲವಿತ್ತು ಮತ್ತು ಜಾತಿಯ ಆಸರೆ ಇತ್ತು. ಹೀಗಾಗಿ ಕರ್ನಾಟಕದ ಸದ್ಯದ ವಾತಾವರಣವನ್ನು ಗಮನಿಸಿದರೆ, ಜಾತಿ, ಹಣ ಮತ್ತು ಶಾಸಕರ ಬಲಗಳಿಲ್ಲದೆ ಸಿಎಂ ಆದ ವೀರಪ್ಪ ಮೊಯ್ಲಿಯವರಂತಹ ಮತ್ತೊಬ್ಬ ನಾಯಕ ಉದಯಿಸುವುದು ಕಷ್ಟ. ಪ್ರಜಾಪ್ರಭುತ್ವ ಎಂತಹ ಸಂಕಷ್ಟದಲ್ಲಿದೆ ಎಂಬುದಕ್ಕೆ ಇದು ಸಾಕ್ಷಿ

” ಸಿಎಂ ಆದ ವೀರಪ್ಪ ಮೊಯ್ಲಿ ಅವರಿಗೆ ಜಾತಿ ಬಲವಿರಲಿಲ್ಲ. ಅವರು ಪ್ರತಿನಿಧಿಸುತ್ತಿದ್ದ ಸಣ್ಣ ಸಮುದಾಯ ಏನಿತ್ತು, ಅದು ರಾಜ್ಯದ ಯಾವ ಕ್ಷೇತ್ರಗಳಲ್ಲೂ ನಿರ್ಣಾಯಕ ಎನ್ನಬಹುದಾದ ಬಲ ಹೊಂದಿರಲಿಲ್ಲ. ಇದೇ ರೀತಿ ಅಷ್ಟು ದೊಡ್ಡ ಗಾತ್ರದ ಶಾಸಕಾಂಗದಲ್ಲಿ ಮೊಯ್ಲಿಯವರಿಗೆ ಬಹುಮತವೂ ಇರಲಿಲ್ಲ.”

-ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

10 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

39 mins ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

1 hour ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

1 hour ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

2 hours ago