ರಾಣಿ ಕೆಂಪನಂಜಮ್ಮಣ್ಣಿಗೆ 19 ಕುಶಾಲುತೋಪುಗಳ ಗೌರವಾರ್ಪಣೆ: ರಾಜರ ಹುಬ್ಬೇರಿಸುವಂತೆ ಮಾಡಿದ ಕರ್ಜನ್‌ ಘೋಷಣೆ!

ಜೆ.ಬಿ.ರಂಗಸ್ವಾಮಿ

ಅಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಿಂಹಾಸನಾರೋಹಣ (08 – 08 – 1902) ನಡೆದ ದಿನ. 1895ರಲ್ಲಿ ಪಟ್ಟಕ್ಕೇರಿದ್ದರೂ ಅಪ್ರಾಪ್ತರಾಗಿದ್ದುದರಿಂದ ಅವರ ತಾಯಿಯವರೇ ರೀಜೆಂಟರಾಗಿ ರಾಜ್ಯಾಡಳಿತ ನೋಡಿಕೊಳ್ಳುತ್ತಿದ್ದರು. ಆ ವೇಳೆಗೆ ನಾಲ್ವಡಿಯವರಿಗೆ ಹದಿನೆಂಟು ತುಂಬಿದ್ದರಿಂದ (ಜನನ: 04-06-1884) ಸಿಂಹಾಸನವನ್ನೇರಿ ರಾಜ್ಯಭಾರ ಮಾಡಲಿದ್ದರು. ಅದಕ್ಕಾಗಿ ವೈಸ್‌ರಾಯ್ ಲಾರ್ಡ್ ಕರ್ಜನ್ ಶಿಮ್ಲಾದಿಂದ ಮೊದಲ ಬಾರಿಗೆ ಸ್ವತಃ ಮೈಸೂರಿಗೆ ಬಂದಿದ್ದರು.

ದೇಶ ವಿದೇಶಗಳಿಂದ ಅತಿಥಿ ಗಣ್ಯರು ಆಗಮಿಸಿದ್ದರು. ಇಡೀ ನಗರ ಅಲಂಕೃತವಾಗಿತ್ತು. ಸಂಸ್ಥಾನದ ಗೌರವಾರ್ಥ ಇಪ್ಪತ್ತೊಂದು ಕುಶಾಲುತೋಪುಗಳ ಗೌರವಾರ್ಪಣೆ ನಡೆಯಿತು. ಫಿರಂಗಿಗಳನ್ನು ಇಪ್ಪತ್ತೊಂದು ಬಾರಿ ಸ್ಛೋಟಿಸುವ ಮೂಲಕ ಸಮಸ್ತ ಸೇನೆ ಸಲ್ಲಿಸುವ ಅತ್ಯುನ್ನತ ಗೌರವಾರ್ಪಣೆ ಅದು. ಈ ಗೌರವ ಸೌಲಭ್ಯವನ್ನು ಕೆಲವೇ ಸಂಸ್ಥಾನಗಳಿಗೆ ನೀಡಲಾಗಿತ್ತು. ಆನೆಯ ಅಂಬಾರಿಯಲ್ಲಿ ಕುಳಿತು ನಡೆಸುವ ದಸರಾ ಜಂಬೂಸವಾರಿ ಮೆರವಣಿಗೆ ವಿಶ್ವದಲ್ಲೇ ಅಪರೂಪದಲ್ಲಿ ಅಪರೂಪದ್ದು. ಅದರ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಬ್ರಿಟಿಷ್ ಚಕ್ರವರ್ತಿನಿ 21 ಫಿರಂಗಿ ಸ್ಛೋಟಕ್ಕೆ ಅನುಮತಿ ದಯಪಾಲಿಸಿದ್ದರು. ಮೈಸೂರು ಮಹಾರಾಜರ ನಂತರ ಹೈದರಾಬಾದ್ ನಿಜಾಮ, ಜಮ್ಮು ಕಾಶ್ಮೀರ ಮತ್ತು ಗ್ವಾಲಿಯರ್ ಮಹಾರಾಜರಿಗೆ 21 ಕುಶಾಲುತೋಪುಗಳ ಗೌರವ ನಿಗದಿಪಡಿಸಿದರು. ಬ್ರಿಟಿಷ್ ರಾಣಿ ಮತ್ತು ವೈಸ್‌ರಾಯ್‌ಗೆ ಇದ್ದ ಈ ಗೌರವಾರ್ಪಣೆಯ ಸಂಖ್ಯೆ ಮೂವತ್ತೊಂದು. ಬ್ರಿಟಿಷ್ ಚಕ್ರವರ್ತಿಗೆ  ನೂರು! ಅದು ವಿಶ್ವದಲ್ಲೇ ಅತಿ ಹೆಚ್ಚು. ಇತರ ಸಂಸ್ಥಾನಗಳಿಗೆ ನೀಡಿದ್ದ ಸಂಖ್ಯೆ 15, 17… ಹೀಗೆ ಆಗಿನ ಬ್ರಿಟಿಷ್ ರೆಸಿಡೆಂಟಿಗೆ ಕೊಡ ಮಾಡಿದ್ದ ಸಂಖ್ಯೆ ಕೂಡ ಕೇವಲ ಹದಿಮೂರು!

ಆಯಾ ಸಂಸ್ಥಾನಗಳ ಅತ್ಯುನ್ನತ ಗೌರವಾರ್ಪಣೆ ಎಂದರೆ ಈ ಕುಶಾಲುತೋಪುಗಳ ಉಡಾವಣೆ. ಶಾಂತಿ ಸಮೃದ್ಧಿಯ ಸಂಕೇತ. ಸಕಲ ಸೈನ್ಯವೂ ಸಜ್ಜಾಗಿ ನಿಂತಿದ್ದಾಗ, ಒಂದೊಂದೇ ಸಶಸ್ತ್ರದಳಗಳು ಪಟಪಟನೆ ಗುಂಡನ್ನು ದಿಗಂತಕ್ಕೆ ಹಾರಿಸುತ್ತಾ ಹೋಗುತ್ತವೆ. ಇಪ್ಪತ್ತು ದಳಗಳು ನಿಂತಿವೆ ಎಂದರೆ ಸರಣಿಯಲ್ಲಿ ಹಾರಿಸುತ್ತಾ ಹೋಗುತ್ತವೆ. ಹೀಗೆ ಹಾರಿಸುವಾಗ ರಟ್ – ಟಟ್ – ಟಟ್ ಎಂಬ ವಿಶಿಷ್ಟ ಲಯದಲ್ಲಿ ಸದ್ದು ಸಾಗುತ್ತದೆ. ಇದು ರಾಜ ಅಥವಾ  ಮುಖ್ಯ ಅತಿಥಿಗೆ ನೀಡುವ ವ್ಯಕ್ತಿ ಗೌರವ.  fue de joie ಫ್ಯೂ ಡಿ’ ಜಾಯ್. ಇದರ ಮುಂದಿನ ಹಂತವೇ 21 ಬಾರಿ ಹಾರಿಸುವ ಫಿರಂಗಿ ಉಡಾವಣೆ. ಇಪ್ಪತ್ತೊಂದನ್ನು ಪ್ರತಿಬಾರಿ ಏಳರಂತೆ ಮೂರು ಹಂತಗಳಲ್ಲಿ ಹಾರಿಸುತ್ತಾರೆ. ಒಂದೊಂದು ಹಂತದಲ್ಲೂ ರಾಷ್ಟ್ರಗೀತೆ ನುಡಿಸಲಾಗುತ್ತದೆ. ಅಂದರೆ 21 ಗನ್ ಸಲ್ಯೂಟ್. ಇದು ರಾಷ್ಟ್ರಕ್ಕೆ ಸಲ್ಲಿಸುವ ಅತ್ಯುನ್ನತ ಗೌರವ. ಜನತೆಯ ಪರವಾಗಿ ಮಹಾರಾಜರು ಸ್ವೀಕರಿಸುತ್ತಾರೆ. ಬೆಸ ಸಂಖ್ಯೆಗೂ ಸಕಾರಣವಿದೆ. ಅನೇಕ ಸಂಸ್ಕ ತಿಗಳಲ್ಲಿ ಸಮಸಂಖ್ಯೆ ಸಾವಿನ ಸೂಚಕ. ಅಲ್ಲದೆ ಈ ಜಗತ್ತು ನಿರ್ಮಾಣವಾಗಿದ್ದು ಏಳು ದಿನಗಳಲ್ಲಿ ಎಂಬ ನಂಬಿಕೆ ಬೇರೆ. ಹೀಗಾಗಿ ವಿಶ್ವದೆಲ್ಲೆಡೆ ಸೈನ್ಯಗಳಲ್ಲಿ ಬೆಸಸಂಖ್ಯೆ ಶುಭ ಸೂಚಕವಾಗಿ ಬಳಕೆಯಲ್ಲಿದೆ.

* * *

ನಾಲ್ವಡಿಯವರು ಸಿಂಹಾಸನವನ್ನೇರಿದ ಕುರುಹಾಗಿ ಆ ದಿನ 21 ಫಿರಂಗಿ ಸಲ್ಯೂಟ್ ನೀಡಿದ್ದು ಅಸಹಜವೆನಿಸಲಿಲ್ಲ. ಆದರೆ ಆ ದಿನ ಲಾರ್ಡ್ ಕರ್ಜನ್ ಮಾಡಿದ ಒಂದು ಘೋಷಣೆ ಇತರ ರಾಜರ ಹುಬ್ಬೇರಿಸಿತು. ಆವರೆಗೆ ರಾಜಪ್ರತಿನಿಯಾಗಿ (regent) ಏಳು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ್ದ ರಾಜಮಾತೆ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಅವರಿಗೆ ಬ್ರಿಟಿಷ್ ಸಾಮ್ರಾಜ್ಯ ಒಂದು ವಿಶಿಷ್ಟ ಕೊಡುಗೆಯನ್ನು ನೀಡಿತ್ತು. ಅವರು ಬದುಕಿರುವ ತನಕ ಹತ್ತೊಂಬತ್ತು ಗನ್ ಸೆಲ್ಯೂಟಿನ ಗೌರವಾರ್ಪಣೆ! ಆದೂ ಅಕಾರದಿಂದ ಇಳಿದ ಮೇಲೆ ನೀಡಲಾದ ಕೊಡುಗೆ.

ಹೊಸ ಮಹಾರಾಜ ನಾಲ್ವಡಿಯವರಿಗೆ ಶುಭ ಹಾರೈಸಿದ ಮೇಲೆ ಕರ್ಜನ್ ರಾಜಮಾತೆಗೆ ನೀಡುವ 19 ಗನ್ ಸೆಲ್ಯೂಟಿನ ಬಗ್ಗೆ ವಿವರಿಸುವಾಗ ಸಭಾಸದರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು.

ಮೈಸೂರು ಸಂಸ್ಥಾನದ ಪೂರ್ವ ಚರಿತ್ರೆಯನ್ನು ಕ್ರೋಢೀಕರಿಸಿ ಹೇಳಿದ ಲಾರ್ಡ್ ಕರ್ಜನ್, ‘ಮಹಾರಾಜರು ಪ್ರಾಪ್ತ ವಯಸ್ಕರಾಗುವ ತನಕ ಎಂಟು ವರ್ಷಗಳ ಕಾಲ ಸರ್ವ ಜನ ಸಮ್ಮತವಾಗುವ ರೀತಿಯಲ್ಲಿ, ಅತ್ಯಂತ ವಿವೇಕ ಮತ್ತು ವಿಚಕ್ಷಣತೆಯಿಂದ ಮಹಾರಾಣಿಯವರು ಆಡಳಿತ ನಡೆಸಿದ ರೀತಿಯನ್ನು’ ಮುಕ್ತ ಕಂಠದಿಂದ ಕೊಂಡಾಡಿದರು.

“ಮಹಾರಾಣಿಯವರು ದೂರದೃಷ್ಟಿ ಇಟ್ಟುಕೊಂಡು ಕಟ್ಟಲು ಪ್ರಾರಂಭಿಸಿದ ವಾಣಿ ವಿಲಾಸ ಅಣೆಕಟ್ಟು (ಹಿರಿಯೂರು ಬಳಿ), ಶಿವನಸಮುದ್ರದ ಬಳಿಯ ಜಲ ವಿದ್ಯುತ್ ಉತ್ಪಾದನೆ ಕೇಂದ್ರ, ಇವೆಲ್ಲವೂ ಅನನ್ಯ ಸಾಧನೆಗಳಾಗಿವೆ. ಇದಲ್ಲದೆ ಮಹಾರಾಣಿಯವರ ತಾಯ್ತನದ ಅಂತಃಕರಣ ಬಹು ದೊಡ್ಡದು. ನಿರ್ಲಕ್ಷಿತರಾಗಿರುವ ದೀನಾತಿದೀನರ ಏಳಿಗೆ ಬಗ್ಗೆ ಅವರು ಅನುಷ್ಠಾನಕ್ಕೆ ತಂದಿರುವ ಕಾರ್ಯಗಳಾದರೂ ಅಷ್ಟೇ. ಸಾಮ್ರಾಜ್ಞಿಯವರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಸಾಮಾಜಿಕ ಪಿಡುಗುಗಳಾಗಿದ್ದ ಬಾಲ್ಯ ವಿವಾಹ ಪದ್ಧತಿ ನಿಷೇಧ (1894), ಬಸವಿ ಬಿಡುವ ಪದ್ಧತಿ ನಿರ್ಮೂಲನೆ (1892), ದಲಿತರಿಗಾಗಿ ಪ್ರತ್ಯೇಕ ಶಾಲೆಗಳು. ಅವರಿಗೆ ವೃತ್ತಿಪರ ಶಿಕ್ಷಣ, ಉಚಿತ ಭೋಜನ, ವಸತಿ, ಬಟ್ಟೆ, ಸ್ಕಾಲರ್‌ಶಿಪ್ ನೀಡಿಕೆ, ಉದ್ಯೋಗದ ಖಾತ್ರಿ ಇರುವ ತಾಂತ್ರಿಕ ಶಿಕ್ಷಣದ ಪಾಲಿಟೆಕ್ನಿಕ್ ನಿರ್ಮಾಣ (1892), ಸಿವಿಲ್ ಸರ್ವೀಸ್ ಪರೀಕ್ಷೆಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆ, ಕಾಲೇಜು, ಆಸ್ಪತ್ರೆಗಳ ಸ್ಥಾಪನೆ ಮುಂತಾದವನ್ನು ಶ್ರದ್ಧೆಯಿಂದ ಕಾರ್ಯಗತಗೊಳಿಸಿದ್ದಾರೆ. ದುರ್ಬಲರಿಗೆ ಹೇರಳ ಅವಕಾಶ ಕಲ್ಪಿಸಿದ್ದಾರೆ. ಕಾನೂನು ರಚಿಸುವುದು ದೊಡ್ಡದಲ್ಲ. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದರಲ್ಲಿ ಸಾಧನೆ ಅಡಗಿದೆ. ಇವೆಲ್ಲವನ್ನೂ ಮಹಾ ಸಾಮ್ರಾಜ್ಞಿ ಮನಗಂಡಿದ್ದಾರೆ. ಅದಕ್ಕಾಗಿ 19 ಕುಶಾಲುತೋಪುಗಳ ಗೌರವಾರ್ಪಣೆಯನ್ನು ಜೀವಮಾನವಿಡೀ ಸ್ವೀಕರಿಸಲು ಅನುವು ಮಾಡಿಕೊಡಲಾಗಿದೆ” ಎಂದಾಗ, ಇಡೀ ಸಭೆ ಕಿವಿಗಡಚಿಕ್ಕುವ ಚಪ್ಪಾಳೆಯಿಂದ ತುಂಬಿ ಹೋಯಿತು.

* * *

ಕೆಂಪನಂಜಮ್ಮಣ್ಣಿಯವರು ರಾಜ್ಯಾಡಳಿತದಿಂದ ನೇಪಥ್ಯಕ್ಕೆ ಸರಿದರೂ ಪ್ರಜೆಗಳ ಕ್ಷೇಮ ಮತ್ತು ಅಭಿವೃದ್ಧಿಯತ್ತ ಅವರ ಗಮನವಿತ್ತು. ಮಗನೊಂದಿಗೆ ಚರ್ಚಿಸುತ್ತಿದ್ದರು. ಅದೊಂದು ಬಾರಿ ಶಿವಮೊಗ್ಗಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಜನ ತುಂಬಿಕೊಂಡಿರುವುದು ಕಾಣಿಸಿತು. ಕಾರಿನಿಂದಿಳಿದು ವಿಚಾರಿಸಿದರೆ ತುಂಬು ಗರ್ಭಿಣಿಯೊಬ್ಬಳು ಹೃದಯ ವಿದ್ರಾವಕವಾಗಿ ಸತ್ತು ಬಿದ್ದಿದ್ದಾಳೆ. ವಿಪರೀತ ರಕ್ತಸ್ರಾವವಾಗಿದೆ. ಒಂದೆರಡು ದಿನಗಳಿಂದ ಬೇನೆ ತಿನ್ನುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನೋವು ತಡೆಯದೆ ತೀರಿಕೊಂಡಿದ್ದಾಳೆ. ಅದಕ್ಕಿಂತ ದಾರುಣವೆಂದರೆ 50- 60 ಮೈಲಿ ಫಾಸಲೆಯಲ್ಲಿ ಒಂದೂ ಪ್ರಸೂತಿ ಕೇಂದ್ರಗಳಿಲ್ಲ. ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಲಾಗುತ್ತಿಲ್ಲ. ಜಾನುವಾರುಗಳಿಗೂ ಇದೇ ಸಮಸ್ಯೆ.

ಪ್ರತಿವರ್ಷ ನೂರಾರು ಗರ್ಭಿಣಿಯರು ಮತ್ತು ಗಬ್ಬದ ಹಸುಗಳ ಸಾವುಗಳು ಸಂಭವಿಸುತ್ತಿವೆ. ಕಾಲುಬಾಯಿ ರೋಗ, ಉಕಾಲು ಜುಲಾಬು, ಕಾಲ್ನಡೆ ಜ್ವರದಿಂದ ದನಕರುಗಳು ನರಳುತ್ತಿವೆ ಎಂದು ಜನ ಅಹವಾಲು ತೋಡಿಕೊಂಡರು. ಕೆಂಪನಂಜಮ್ಮಣ್ಣಿಯವರ ಮನಸ್ಸು ಕದಡಿ ಹೋಯಿತು. ಏನೋ ಸಂಕಲ್ಪ ಮೂಡಿತು. ಅದನ್ನು ಅಲ್ಲಿದ್ದ ಜನಕ್ಕೆ ಹೇಳಿಯೂ ಬಿಟ್ಟರು. ಮೈಸೂರಿಗೆ ಬಂದವರೇ ಮಗ ನಾಲ್ವಡಿಯವರ ಬಳಿ ಕೋರಿಕೆ ಮುಂದಿಟ್ಟರು. ಮೈಸೂರು ಸಂಸ್ಥಾನದ ಎಲ್ಲ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ತುರ್ತುಚಿಕಿತ್ಸೆ ನೀಡಬಲ್ಲ ಒಂದೊಂದು ಚಿಕ್ಕದಾದ ಹೆರಿಗೆ ಆಸ್ಪತ್ರೆ ಮತ್ತು ಪಶುವೈದ್ಯಶಾಲೆ ನಿರ್ಮಿಸುವಂತೆ ಕೇಳಿಕೊಂಡರು.

ತಾಯಿಯ ಮಾತನ್ನು ಎಂದೂ ಮೀರದ ನಾಲ್ವಡಿಯವರು, ಅಂದು ಅಮ್ಮನ ಮಾತಿಗೆ ಮುನಿದುಬಿಟ್ಟರು. “ಕನ್ನಂಬಾಡಿ ಕಟ್ಟುವುದಕ್ಕೇ ರಾಜ್ಯದ ಬೊಕ್ಕಸ ಬರಿದಾಗಿದೆ. ಸಂಸ್ಥಾನದೆಲ್ಲೆಡೆ ಸಾಲ ಎತ್ತಿರುವುದು ಗೊತ್ತಿಲ್ಲವೇ? ಆ ಕೆಲಸವೇ ಇನ್ನೂ ಮುಗಿದಿಲ್ಲ. ಬೆಂಕಿರೋಗಕ್ಕೂ (1919ರ ಪ್ಲೇಗ್ ) ಜನರಿಗೆ ಸರಿಯಾದ ಸೌಲಭ್ಯ ಒದಗಿಸಲಾಗುತ್ತಿಲ್ಲ. ಬರಗಾಲದ ಸಮಸ್ಯೆಗಳು ನೂರಾರಿವೆ. ಯಾವುದೇ ಹೊಸ ಖರ್ಚು ಈಗ ಬಿಲ್‌ಕುಲ್ ಆಗುವುದಿಲ್ಲ. ನಿಧಾನವಾಗಿ ಮಾಡೋಣ” ಎಂದುಬಿಟ್ಟರು.

ಪ್ರೀತಿಯ ಮಗನಾದರೇನು? ಆತ ರಾಜ ತಾನೇ? ರಾಜನ ಮಾತಿಗೆ ಎದುರಾಡುವುದುಂಟೇ?  ಆ ತಾಯಿ ಕಣ್ಣೀರು ಮಿಡಿದು ಮೌನವಾದರು.

ತಮ್ಮ ಸ್ವಂತ ಒಡವೆಗಳನ್ನು ಅಡವಿಟ್ಟು ಸಾಲ ತೆಗೆದುಕೊಳ್ಳೋಣವೆಂದರೆ, ರಾಜ್ಯದ ಸಮಸ್ಯೆಗಳು ಸದ್ಯಕ್ಕೆ ಮುಗಿಯುವಂತಹವಲ್ಲ.

ಅಡವಿಟ್ಟಿದ್ದನ್ನು ಬಿಡಿಸಿಕೊಳ್ಳುವುದಾದರೂ ಯಾವಾಗ? ಜನಾನ ಸಮ್ಮುಖದಲ್ಲಿದ್ದ ತಮ್ಮ ಸ್ವಂತ ಒಡವೆಗಳನ್ನು ಬೊಂಬಾಯಿಯಲ್ಲಿ ಮಾರಿಸಿ ಸಂಸ್ಥಾನದ ನಾನಾ ಕಡೆ ಹೆರಿಗೆ ಮತ್ತು ಪಶು ಚಿಕಿತ್ಸಾ ಕೇಂದ್ರಗಳನ್ನು ತೆರೆದಿದ್ದು ಇತಿಹಾಸ.

ಈ ಮನೋಧರ್ಮವಿದ್ದ ಮಾತೆ ಬರಿಯ ಹತ್ತೊಂಬತ್ತೇನು? ಇಪ್ಪತ್ತೊಂದು ಕುಶಾಲುತೋಪುಗಳ ಗೌರವಾರ್ಪಣೆಗೂ ಅವರು ಅರ್ಹರಾಗಿದ್ದರು.

ಇದನ್ನೂ ಓದಿ: ಅರಸೊತ್ತಿಗೆಯ ನಂತರದ ದಸರಾ… 1975ರಲ್ಲಿ ನಡೆಯಿತು ಮೊದಲ ಜನತಾ ದಸರಾ

× Chat with us