ರೋಬಸ್ಟಾ ಗಿಡದ ಬೊಡ್ದೆಗೆ ಅರೇಬಿಕಾ ಚಿಗುರಿನ ಕಸಿ

ಪುತ್ತರಿರ ಕರುಣ್ ಕಾಳಯ್ಯ

 

ವಿವಿಧ ತಳಿಯ ಕಾಫಿ ಬೆಳೆಗಳನ್ನು ಕಾಫಿ ತೋಟಗಳಲ್ಲಿ  ಬೆಳೆಸುವ ಮೂಲಕ ಅಧಿಕ ಇಳುವರಿಯನ್ನು ಪಡೆಯಲು ಬೆಳೆಗಾರರು ಪ್ರಯತ್ನಿಸುವುದು ಸಹಜ.  ಆದರೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಿರಿಕರ ಗ್ರಾಮದ ಹಿರಿಕರ ಗ್ರಾಮದ ಕಾಫಿ ಬೆಳೆಗಾರ ವಿಕ್ರಂ ತನ್ನ  ನಾಲ್ಕು ಏಕರೆಗಳ ಕಾಫಿ ತೋಟದಲ್ಲಿ  ಹಳೆಯ ರೋಬಸ್ಟಾ ಗಿಡಗಳಿಗೆ ಅರೇಬಿಕಾ ಗಿಡಗಳ ಚಿಗುರನ್ನು ಕಸಿ ಮಾಡುವ ಮೂಲಕ  ಕಾಫಿ ಬೆಳೆಯಲ್ಲಿ ನೂತನ ಇಳಿವರಿ ಪಡೆಯುತ್ತಿದ್ದಾರೆ.

ಕಾಫಿ ಬೆಳೆಯಲ್ಲಿ ಹಲವು ತಳಿಗಳಿದ್ದು ಅದರಲ್ಲೂ ಇತ್ತೀಚೆಗೆ ಅತೀ ಶೀಘ್ರದಲ್ಲಿ ಫಸಲು ನೀಡುವ ವಿನೂತನ ತಳಿಗಳನ್ನು ಬೆಳೆಗಾರರು  ಬೆಳೆಯುತ್ತಿದ್ದಾರೆ. ಆದರೆ ಇಲ್ಲಿ ರೋಬಸ್ಟಾ ಕಾಫಿ ಗಿಡಕ್ಕೆ ಅರೇಬಿಕಾ ಕಾಫಿಯನ್ನು ಕಸಿ ಮಾಡಿ ಉತ್ತಮ ಫಸಲು ಪಡೆಯಬಹುದೆಂಬುದೇ ಇದರ ವಿಶೇಷ.

ಸಾಮಾನ್ಯವಾಗಿ ರೋಬಸ್ಟಾ ಅಥವಾ ಅರೇಬಿಕಾ ಕಾಫಿ ಗಿಡಗಳನ್ನು  ನೆಟ್ಟು  ಫಸಲು ಬರಬೇಕಾದರೆ ಸುಮಾರು ೪ ರಿಂದ ೫ ವರ್ಷಗಳೇ ಕಾಯಬೇಕು.ಆದರೆ ಇತ್ತೀಚೆಗೆ ಮೂರು ವರ್ಷದಲ್ಲಿ ಫಸಲು ಬರುವ ಕಾಫಿಯನ್ನು ಬೆಳೆಸಲಾಗುತ್ತಿದೆ. ಆದರೆ  ರೋಬಸ್ಟಾ ಕಾಫಿಗೆ ಅರೇಬಿಕಾ ಕಾಫಿಯನ್ನು ಕಸಿ ಮಾಡುವ ಮೂಲಕ ಒಂದೇ ವರ್ಷದಲ್ಲಿ ಫಸಲು ಪಡೆಯಬಹುದು ಎಂಬುದನ್ನು ವಿಕ್ರಂ ಸಾಧಿಸಿ ತೋರಿಸಿದ್ದಾರೆ. ಸುಮಾರು ನಾಲ್ಕು ಎಕರೆಗಳ ಪ್ರದೇಶದಲ್ಲಿ ಕಸಿ ಕಟ್ಟಿದ ಕಾಫಿ ಗಿಡವನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

 

ನಾಲ್ಕು ಎಕರೆಗಳ ಪ್ರದೇಶದಲ್ಲಿ ರೋಬಸ್ಟಾ ಕಾಫಿ ಗಿಡಗಳನ್ನು ಬೆಳೆಸಲಾಗಿತ್ತು. ಆದರೆ ಅತೀ ಶೀತದಿಂದಾಗಿ ಗಿಡ ಚೆನ್ನಾಗಿದ್ದರೂ ಇಳುವರಿ ಕಡಿಮೆ ಸಿಗುತ್ತಿತ್ತು.  ಎಲ್ಲ ಗಿಡಗಳನ್ನು ತೆಗೆದು ಹೊಸದಾಗಿ ಅರೇಬಿಕಾ ಗಿಡಗಳನ್ನು ಹಾಕಿದರೆ ಫಸಲಿಗೆ ಮತ್ತೆ ಐದು ವರ್ಷ ಕಾಯಬೇಕಾಗುತ್ತದೆ. ಆದ್ದರಿಂದ ಸುಮಾರು ೨೦ ವರ್ಷಗಳು ಫಸಲು ಬರದ ರೋಬಸ್ಟಾ ಕಾಫಿ ಗಿಡವನ್ನು ಕತ್ತರಿಸಿ ಅದರ ಕಾಂಡಲ್ಲಿ  ಚಿಗುರು ಬರುವಂತೆ ನೋಡಿಕೊಳ್ಳಲಾಗುತ್ತದೆ. ಚಿಗುರು ಬಂದ ನಂತರ ಉತ್ತಮ ಫಸಲು ನೀಡುವ ಬೆಳೆದ ಅರೇಬಿಕಾ ಕಾಫಿ ಗಿಡದ ಚಿಗುರನ್ನು ತೆಗೆದುಕೊಂಡು ರೋಬೆಸ್ಟಾ ಬೊಡ್ಡೆಗೆ ಕಸಿಯಲ್ಲಿ ಬೆಳೆದ ಚಿಗುರಿಗೆ ಕಟ್ಟಲಾಗುತ್ತದೆ. ಇದು ಒಂದೇ ವರ್ಷದಲ್ಲಿ ಫಸಲು ಬಿಡಲು ಆರಂಭಿಸುತ್ತದೆ. ಕೇವಲ ಎರಡು ವರ್ಷಗಳಲ್ಲಿ ದೊಡ್ಡ ಗಿಡವಾಗಿ ಬೆಳೆದು ಯಥೇಚ್ಚವಾಗಿ ಕಾಫಿ ಇಳುವರಿ ಸಿಗುತ್ತದೆ. ಈ ರೀತಿ ಮಾಡುವುದರಿಂದ ಅರೇಬಿಕಾ ಕಾಫಿಯ ಗಾತ್ರ ದೊಡ್ಡದಾಗಿ ಉತ್ತಮ ಗುಣಮಟ್ಟದ ಕಾಫಿ ಲಭಿಸುತ್ತಿದೆ.ಜೊತೆಗೆ ಇಳುವರಿ ಹೆಚ್ಚಾಗಿದ್ದು ಕಾಫಿ ಗಿಡವೂ ಹುಲುಸಾಗಿ ಬೆಳೆಯುತ್ತದೆ.

   ವಿಕ್ರಂ ಅವರಿಗೆ ಚಿಕ್ಕಮಗಳೂರು ಬಾಳೆಹೊನ್ನೂರಿನಲ್ಲಿ ಕಾಫಿ ಕಸಿ ಮಾಡಲು ಸಹಕಾರ ನೀಡಲಾಯಿತು.  ಎರಡು ದಿನಗಳ ಕಸಿ ಮಾಡುವುದನ್ನು ತೋರಿಸಿ ಕೊಟ್ಟ ನಂತರ ವಿಕ್ರಂ ಮತ್ತು ಅವರ ತಾಯಿ  ಪ್ರಮೀಳಾ ಚೆನ್ನಪ್ಪ ಸೇರಿ ಉಳಿದ ಗಿಡಗಳಿಗೆ ಕಸಿ ಕಟ್ಟಿದ್ದಾರೆ. ಇದೀಗ ನಾಲ್ಕು ಎಕರೆಗಳ ಕಾಫಿ ತೋಟದಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಅಧಿಕ ಆದಾಯ

ಒಂದು ಎಕರೆಯಲ್ಲಿ ಸುಮಾರು ೨೫ ಚೀಲಗಳಷ್ಟು ಪಾರ್ಚ್‌ಮೆಂಟ್ ಕಾಫಿ ಸಿಗುತ್ತಿದೆ. ಒಂದು ಚೀಲಕ್ಕೆ ಈಗ ೧೫,೪೦೦ ರಿಂದ೧೫,೭೦೦ ರೂ.ಗಳವರೆಗೆ ಬೆಲೆಯಿದೆ. ಖರ್ಚು ಕಳೆದು ಒಂದು ಎಕರೆಗೆ ಸುಮಾರು ಮೂರು ಲಕ್ಷ ರೂ.ಗಳಷ್ಟು ಆದಾಯ ಬರುತ್ತಿದೆ. ಇನ್ನೂ ಅರೇಬಿಕಾ ಕಾಫಿ ಹಣ್ಣಾಗುವ ಸಮಯದಲ್ಲಿ ಮಳೆಯಾದರೆ ಹಣ್ಣು ಒಡೆದು ಉದುರಿ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಆದರೆ ಈ ಕಸಿ ವಿಧಾನದಿಂದ ಮಳೆಯಾದಾಗ ಹಣ್ಣು ಒಡೆಯುವುದಿಲ್ಲ ಹಾಗೂ ಉದುರುವುದಿಲ್ಲ. ಇದು ಕೂಡ ಬೆಳೆಗಾರರಿಗೆ ವರದಾನವಾಗಲಿದೆ. ಜೊತೆಗೆ ಈ ಕಾಫಿಗೆ ಅರೇಬಿಕಾ ಕಾಫಿಗೆ ಸಿಂಪಡಣೆ ಮಾಡಿದಂತೆ ಔಷಧಿ ಹಾಕುವ ಕೆಲಸವಿಲ್ಲ. ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಕಸಿ ವಿಧಾನದ ಪ್ರೋಂಜನಕಾರಿಯಾಗಲಿದೆ ಎನ್ನುತ್ತಾರೆ ಬೆಳೆಗಾರ ವಿಕ್ರಂ.

ಹೆಚ್ಚಿನ ಮಾಹಿತಿಗಾಗಿ ಫೋನ್: 7022989825 ಸಂಪರ್ಕಿಸಬಹು.