ಮೇಕೆದಾಟು ಯೋಜನೆ ಸೇರಿದಂತೆ ಅಂತರರಾಜ್ಯ ಜಲವಿವಾದಗಳನ್ನು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲಾ ಒಟ್ಟಾಗಿ ಹೋರಾಡಬೇಕು, ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ನಾಡಿನ ಜಲ, ನೆಲ ಮತ್ತು ಇನ್ನುಳಿದ ಹೋರಾಟಗಳಲ್ಲಿ ಸರ್ಕಾರದ ಜೊತೆ ನಿಂತಿದ್ದೇವೆ. ಈಗ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷದ ನಾಯಕರ ಸರದಿ. ನಾವು ಅವರ ಸಹಕಾರ ಕೋರುತ್ತೇವೆ. ಅಂತರರಾಜ್ಯ ಜಲ ವಿವಾದಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆ ಕರೆದಿದ್ದೇನೆ, ನಾವು ಹೇಗೆ ಮುಂದುವರಿಯಬೇಕು, ನಮಗಿರುವ ತೊಡಕುಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು ಅಂತ ವಿರೋಧ ಪಕ್ಷದ ಸಲಹೆ ಸೂಚನೆಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಲಾಗಿದೆ,’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

‘ಅಂತರರಾಜ್ಯ ಜಲವಿವಾದಗಳ ಬಗ್ಗೆ ಎಲ್ಲ ಹಿರಿಯ ನ್ಯಾಯವಾದಿಗಳು, ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಸಭೆಯಲ್ಲಿ ಕೃಷ್ಣಾ, ಮಹಾದಾಯಿ ಯೋಜನೆಗಳ ಬಗ್ಗೆ ಚರ್ಚೆಯಾಗಿದೆ. ನ್ಯಾಯವಾದಿಗಳು ಹಲವಾರು ಕೇಸ್ಗಳ ಬಗ್ಗೆ ತಿಳಿಸಿದ್ದಾರೆ. ಎಲ್ಲ ಜಲವಿವಾದಗಳಿಗೆ ಸಂಬಂಧಿಸಿದಂತೆ ಜನವರಿ ಕೊನೆವಾರದಲ್ಲಿ ಮತ್ತೊಂದು ಸಭೆ ನಡೆಸುತ್ತೇವೆ,’ ಎಂದು ಹೇಳಿದರು.