ಚಲನಚಿತ್ರ ವಿದ್ಯಾರ್ಥಿಗಳಿಗೆ ಆಕರ, ಪಠ್ಯ ಆಗಬಹುದು

-ಬಾ.ನಾ.ಸುಬ್ರಹ್ಮಣ್ಯ

ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ ಕನ್ನಡ ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟ ವಿಷಯಗಳ ಕುರಿ ತಂತೆ ಸಂಶೋಧನೆ ನಡೆಸಿ ಬರೆದ ತಮ್ಮ ಮಹಾಪ್ರಬಂಧಗಳಿಗೆ ಇಬ್ಬರು ಡಾಕ್ಟರೇಟ್ ಪಡೆದರು. ಮೈಸೂರಿನ ಡಿಸಿಆರ್‌ಇಯಲ್ಲಿ ಪ್ರಸ್ತುತ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಬಿ.ಟಿ ಕವಿತಾ ಹಾಗೂ ಹಿನ್ನೆಲೆ ಗಾಯಕಿ ಆರ್.ಪ್ರಿಯದರ್ಶಿನಿ ಈ ಪದವಿ ಪಡೆದ ಇಬ್ಬರು ಮಹಿಳೆಯರು.

`ಕನ್ನಡ ಚಲನಚಿತ್ರಗಳಲ್ಲಿ ಪೊಲೀಸ್ ವ್ಯವಸ್ಥೆ ಪ್ರತಿನಿಧೀಕರಣ- ಒಂದು ಸಾಂಸ್ಕೃತಿಕ ಅಧ್ಯಯನ’, ಕವಿತಾ ತಮ್ಮ ಸಂಶೋಧನೆಗೆ ಆರಿಸಿಕೊಂಡಿರುವ ವಿಷಯ. ಕನ್ನಡ ಭಾಷೆ ಮತ್ತು ಸಾಹಿತ್ಯ ವಿಷಯದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರಿಗೆ ಸಂಶೋಧನೆಗೆ ಗೈಡ್ ಆಗಿದ್ದವರು ಡಾ.ಎನ್.ಕೆ ಲೋಲಾಕ್ಷಿ. ಕವಿತಾ ಅವರು ತಮ್ಮ ಸಂಶೋಧನೆಗಾಗಿ ಸುಮಾರು ಎಪ್ಪತ್ತು ಕನ್ನಡ ಚಿತ್ರಗಳನ್ನು ನೋಡಿ, ಅಲ್ಲಿನ ಪೊಲೀಸ್ ಪಾತ್ರಗಳ ವಿವಿಧ ರೀತಿಯ ನಿರೂಪಣೆಯನ್ನು ವಿಶ್ಲೇಷಿಸಿದ್ದಾಗಿ ಹೇಳುತ್ತಾರೆ. ಭಾರತೀಯ ದಂಡ ಸಂಹಿತೆ, ಪೊಲೀಸ್ ಕಾನೂನು, ನಿಯಮಾವಳಿಗಳೇ ಮೊದಲಾದವನ್ನು ಅವರಿಗೆ ತರಬೇತಿ ಅವಧಿಯಲ್ಲಿ ಹೇಳಿಕೊಡಲಾಗುತ್ತದೆ. ಅದು ಸಂಶೋಧನೆಗೆ ಅವರಿಗೆ ಆಕರವೂ, ಆಧಾರವೂ ಆಗುತ್ತದೆ.

`ಸ್ಕೂಲ್ ಮಾಸ್ಟರ್’, `ಕೊಟ್ರೇಶಿ ಕನಸು’, ಸೇರಿದಂತೆ ವೀಕ್ಷಿಸಿದ 70 ಚಿತ್ರಗಳಲ್ಲಿ ಬರುವ ಪೊಲೀಸ್ ಪಾತ್ರಗಳ ವಿಶ್ಲೇಷಣೆ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಮಾಜದ ವಿವಿಧ ವರ್ಗಗಳಲ್ಲಿ ಪಾತ್ರಗಳು, ಅವುಗಳ ಅನುಸಂಧಾನ ಅವರ ಸಂಶೋಧನೆಯ ಮೂಲ ಆಶಯ. ಪೊಲೀಸ್ ಅಧಿಕಾರಿಯೊಬ್ಬರು, ತಮ್ಮ ಒತ್ತಡದ ವೃತ್ತಿಜೀವನದ ನಡುವೆ, ಕನ್ನಡ ಚಿತ್ರಗಳಲ್ಲಿ ತಮ್ಮ ಕ್ಷೇತ್ರದ ಮಂದಿಯ ನಿರೂಪಣೆಯನ್ನು ಗಂಭೀರವಾಗಿ ಅಧ್ಯಯನ ವಿಷಯವಾಗಿ ತೆಗೆದುಕೊಂಡು, ಸಾಂಸ್ಕೃತಿಕ ಲೋಕದಲ್ಲಿ ಶೈಕ್ಷಣಿಕ ಹೆಜ್ಜೆ ಇಟ್ಟಿರುವುದು ನಿಜಕ್ಕೂ ಶ್ಲಾಘನೀಯ.

ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಅವರ ಸಂಶೋಧನಾ ವಿಷಯ ʻಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮಾ – ಎ ಸ್ಟಡಿʼ (ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ಸಂಗೀತ: ಒಂದು ಅಧ್ಯಯನ). ಇಂಜಿನಿಯರಿಂಗ್ ಪದವೀಧರೆಯಾದ ಇವರು, ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಇದೀಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಸಿ.ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನೆ ನಡೆಸಿ ಪಿಎಚ್.ಡಿ ಪಡೆದಿದ್ದಾರೆ. ಅವರು ಹಿನ್ನೆಲೆ ಗಾಯನವನ್ನೇ ತಮ್ಮ ವೃತ್ತಿಯಾಗಿ ಸ್ವೀಕರಿಸಿಕೊಂಡಿದ್ದಾರೆ.

ಪ್ರಿಯದರ್ಶಿನಿ ಅವರು ತಮ್ಮ ಮಹಾಪ್ರಬಂಧಕ್ಕಾಗಿ 1917ರಿಂದ 2020ರವರೆಗೆ, ನೂರು ವರ್ಷಗಳಿಗೂ ಮಿಗಿಲಾಗಿ ತಯಾರಾದ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ, ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆ ಸಂಗೀತ ಇವುಗಳಲ್ಲಿ ಆಯ್ದ ಗೀತೆಗಳನ್ನು ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಿದ್ದಾಗಿ ಹೇಳುತ್ತಾರೆ. ಚಲನಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ಧ್ವನಿಮುದ್ರಣ, ಆ ತಂತ್ರಜ್ಞಾನದ ಬೆಳವಣಿಗೆಗಳನ್ನು ಅಲ್ಲಲ್ಲಿ ಪ್ರಸ್ತಾಪಿಸಿದ್ದಾರಂತೆ. ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ. ತಮ್ಮ ಸಂಶೋಧನೆಗಾಗಿ ಹೆಸರಾಂತ ಸಂಗೀತ ಸಂಯೋಜಕರು, ಗಾಯಕರು, ನಿರ್ದೇಶಕರುಗಳನ್ನು ಭೇಟಿಯಾಗಿರುವ ಅವರು, ಇದೀಗ ಬೆಂಗಳೂರಿನಲ್ಲಿ ತಮ್ಮ ತಂದೆಯವರ ಪ್ರಿಸಂ ಟ್ರಸ್ಟ್ ನಡೆಸುತ್ತಿರುವ ಸಂಗೀತ ಶಾಲೆಯಲ್ಲಿ ಅಧ್ಯಾಪಕಿ. ಅಲ್ಲಿ ಚಲನಚಿತ್ರ ಸಂಗೀತವನ್ನು, ʻಜನಪ್ರಿಯ ಸಂಗೀತʼ ಎಂದು ಒಂದು ವಿಷಯವಾಗಿ ಕಲಿಸಲಾಗುತ್ತಿದೆಯಂತೆ. ಇದೇ ವಿಷಯವನ್ನು ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಓದುವ ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯವಾಗಿ ಪರಿಗಣಿಸಲು ಸಲಹೆ ನೀಡಿದ್ದಾರಂತೆ.

ಕನ್ನಡ ಚಲನಚಿತ್ರಗಳಿಗೆ ಸಂಬಂಧಪಟ್ಟಂತೆ ಅಲ್ಲಲ್ಲಿ ಸಂಶೋಧನೆಗಳು ಆಗುತ್ತವೆ. ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು, ರಂಗಭೂಮಿ ಮತ್ತು ಸಿನಿಮಾ, ಗಿರೀಶ್ ಕಾಸರವಳ್ಳಿ, ನಾಗಾಭರಣ, ಬರಗೂರು ರಾಮಚಂದ್ರಪ್ಪ ಮುಂತಾದ ನಿರ್ದೇಶಕರ ಚಿತ್ರಗಳ ಅಧ್ಯಯನ, ವಿಶ್ವ ಸಿನಿಮಾ ನೆಲೆಯಲ್ಲಿ ಕನ್ನಡ ಚಿತ್ರರಂಗ ಮುಂತಾದ ವಿಷಯಗಳ ಕುರಿತಂತೆ ಸಂಶೋಧನೆ ಮಾಡಿ ಈಗಾಗಲೇ ಹಲವರು ಡಾಕ್ಟರೇಟ್ ಪಡೆದಿದ್ದಾರೆ. ಈಗಲೂ ಹಲವಾರು ಮಂದಿ ಸಂಶೋಧನಾ ವಿದ್ಯಾರ್ಥಿಗಳು ಸಿನಿಮಾ ಸಂಬಂಧಪಟ್ಟ ವಿಷಯಗಳನ್ನು ಆರಿಸಿಕೊಂಡಿದ್ದಾರೆ.

ಸಂಶೋಧನಾ ಪ್ರಬಂಧಗಳಲ್ಲಿ ಕೆಲವು ಪ್ರಕಟವಾಗಿ ಲಭ್ಯವಿವೆ. ಇನ್ನೂ ಕೆಲವು ಪ್ರಕಟವಾಗಿಲ್ಲ, ಇಂತಹ ಕೃತಿಗಳನ್ನು ವಿಶ್ವದ್ಯಾನಿಲಯಗಳು, ಪುಸ್ತಕ ಪ್ರಾಧಿಕಾರ, ಚಲನಚಿತ್ರ ಅಕಾಡೆಮಿ ಪ್ರಕಟಣೆಗೆ ತೆಗೆದುಕೊಳ್ಳಬಹುದು. ಕನ್ನಡದಲ್ಲಿ ಚಲನಚಿತ್ರ ಮಾಧ್ಯಮದ ಕುರಿತಂತೆ ಪ್ರಕಟವಾಗಿರುವ ಕೃತಿಗಳ ಸಂಖ್ಯೆ ಬಹಳ ಕಡಿಮೆ. ಛಾಯಾಗ್ರಹಣ, ಸಂಕಲನ, ಧ್ವನಿಮುದ್ರಣ, ಡಿಜಿಟಲ್ ತಂತ್ರಜ್ಞಾನ, ಗ್ರಾಫಿಕ್ಸ್, ಅನಿಮೇಶನ್ ಮುಂತಾದ ಚಲನಚಿತ್ರ ತಂತ್ರಜ್ಞಾನ ವಿಭಾಗಗಳು ಬಹುಶಃ ಬೆರಳೆಣಿಕೆಯಷ್ಟಿರಬಹುದು. ಕೆಲವು ಇಲ್ಲದೇ ಕೂಡಾ ಇರಬಹುದು. ಇಂತಹವುಗಳನ್ನು ಸಂಪಾದಿಸಿ ಪ್ರಕಟಿಸುವ ಕೆಲಸಗಳಾಗಬೇಕು.

ಚಲನಚಿತ್ರ ಮತ್ತು ಟಿವಿ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸ್ನಾತಕೋತ್ತರ ಪದವಿ, ಪದವಿ, ಡಿಪ್ಲೊಮಾ, ಸರ್ಟಿಫಿಕೇಟ್, ಐಟಿಐ ಅಧ್ಯಯನ ಅವಕಾಶಗಳು ಹೆಚ್ಚತೊಡಗಿವೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಕೋರ್ಸ್‌ಗಳಿವೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲೂ ಇವು ಸೇರ್ಪಡೆಯಾಗಿವೆ. ಚಲನಚಿತ್ರ ಅಧ್ಯಯನಕ್ಕೆ ಮಾತ್ರ ಮೀಸಲಾದ ಶಿಕ್ಷಣ ಸಂಸ್ಥೆಗಳಿವೆ. ಪೂನಾದಲ್ಲಿ ರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ, ಕೊಲ್ಕೊತ್ತಾದಲ್ಲಿರುವ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಕೇಂದ್ರ ಸರ್ಕಾರದ ಸಂಸ್ಥೆಗಳು. ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲೂ, ಚಲನಚಿತ್ರ ತರಬೇತಿ ಸಂಸ್ಥೆಗಳಿವೆ.

ದೇಶದಲ್ಲೇ ಮೊದಲು ಚಲನಚಿತ್ರಕ್ಕೆ ಸಂಬಂಧಪಟ್ಟ ತರಬೇತಿ ಸಂಸ್ಥೆ ಆರಂಭಿಸಿದ್ದು ಬೆಂಗಳೂರಿನಲ್ಲಿ. ಛಾಯಾಗ್ರಹಣ ಮತ್ತು ಶಬ್ದಗ್ರಹಣ ಡಿಪ್ಲೊಮಾ 1943ರಲ್ಲೇ ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಆರಂಭವಾಗಿತ್ತು. ಇದೀಗ ಅವೇ ಎರಡು ಡಿಪ್ಲೊಮಾಗಳನ್ನು ನೀಡುವ ಆ ಸಂಸ್ಥೆ, ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಾಗಿ ಹೆಸರಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಆಗಿಹೋದವರ, ಅದು ನಡೆದು ಬಂದ ಹಾದಿಯ ಕುರಿತಂತೆ ಪರಿಚಯ, ವಿಶ್ಲೇಷಣೆ ಇತ್ಯಾದಿ ಕೃತಿಗಳು ಬರಬೇಕು. ಪೂನಾದಲ್ಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಸಂಸ್ಥೆ, ಇಂತಹ ಕೆಲಸ ಮಾಡುತ್ತಿದೆ. ಎಲ್ಲ ಭಾರತೀಯ ಭಾಷೆಗಳ ಚಿತ್ರರಂಗಗಳ ಕುರಿತ ಅಧ್ಯಯನ, ವ್ಯಕ್ತಿಪರಿಚಯ, ಅವರ ಆಡಿಯೋ ಸಂದರ್ಶನ ಇತ್ಯಾದಿಗಳನ್ನು ಸಂಗ್ರಹಿಸುವ, ಪ್ರಾಯೋಜಿಸುವ ಕೆಲಸಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಕೂಡಾ ಅಂತಹ ಕೆಲಸ ಆಗಬೇಕು. ಚಲನಚಿತ್ರ ವಿದ್ಯಾರ್ಥಿಗಳಿಗೆ ಅವು ಆಕರಗಳಾಗಬಹುದು, ಪಠ್ಯಗಳಾಗಬಹುದು.

ಕನ್ನಡ ಚಿತ್ರರಂಗಕ್ಕೆ ಅದರದೇ ಆದ ಇತಿಹಾಸ ಇದೆ. ಭಾರತೀಯ ಚಿತ್ರರಂಗ ದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದ ಕನ್ನಡ ಚಿತ್ರರಂಗದ 70-80ರ ದಶಕವನ್ನು ಸುವರ್ಣ ದಶಕ ಎಂದು ಕರೆಯಲಾಗುತ್ತದೆ. ʻಭಾರತೀಯ ಚಿತ್ರರಂಗದ ಭವಿಷ್ಯ ಕನ್ನಡ ಚಿತ್ರರಂಗದಲ್ಲಿದೆʼ ಎಂದು ಆ ದಿನಗಳಲ್ಲೇ ದೇಶದ ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಹೇಳಿದ್ದರು. ಅವು ಸಂಸ್ಕಾರ, ಚೋಮನ ದುಡಿ, ಘಟಶ್ರಾದ್ಧ, ಹಂಸಗೀತೆ, ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ಬೆಳ್ಳಿಮೋಡ, ಗೆಜ್ಜೆಪೂಜೆಯಂತಹ ಚಿತ್ರಗಳ ದಿನಗಳು.

ಹ್ಞಾಂ, ಕೊರೊನಾ ವೈರಾಣು ಚಿತ್ರೋದ್ಯಮದ ವ್ಯವಸ್ಥೆಗೇ ಸವಾಲು ಹಾಕಿದಂತಿದೆ. ಡಿಜಿಟಲ್ ತಂತ್ರಜ್ಞಾನ ಅದಕ್ಕೆ ಒತ್ತಾಸೆಯಾಗಿದೆ. ಚಿತ್ರಮಂದಿರ ಗಳಲ್ಲಿ ಪ್ರದರ್ಶನ ಈಗ ಅರ್ಧಕ್ಕರ್ಧ. ಆ ಕಾರಣದಿಂದಲೇ, ವಿತರಕ/ ನಿರ್ಮಾಪಕರದೂ ಅರೆಮನಸ್ಸು. ಅದರ ಪರಿಣಾಮ ವರ್ಚಸ್ವಿ ನಟರ ಮೇಲೆ ಬೀರಲಿದೆ. ಹಿಂದಿ ಚಿತ್ರರಂಗದಲ್ಲಿ ಈ ತಾರಾವರ್ಚಸ್ಸಿನ ಕುರಿತಂತೆ ಜಿಜ್ಞಾಸೆ ಆರಂಭ ವಾಗಿದೆ. ಒಟಿಟಿ ತಾಣಗಳು, ತಾರಾವರ್ಚಸ್ಸನ್ನು ಉಸಿರು ಕಟ್ಟಿಸಿವೆ ಎನ್ನುವ ಮಾತು ಅಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ತೆರೆಕಂಡ ಜನಪ್ರಿಯ ನಟರ ಚಿತ್ರಗಳು ಬಾಕ್ಸಾಫೀಸಿನಲ್ಲಿ ನಿರೀಕ್ಷೆಯನ್ನು ಹುಸಿಮಾಡಿದ್ದು ಈ ಮಾತಿಗೆ ಕಾರಣ. ಇದು ಹಿಂದಿ ಚಿತ್ರರಂಗಕ್ಕೆ ಮಾತ್ರ ಮೀಸಲೇ, ಇಲ್ಲ, ಇತರ ಭಾಷಾ ಚಿತ್ರಗಳಲ್ಲೂ ಇಂತ ಹದೇ ಬೆಳವಣಿಗೆ ಆಗಬಹುದೇ ಎನ್ನುವುದನ್ನು ಬರುವ ದಿನಗಳಷ್ಟೇ ಹೇಳಬೇಕು.

ಒಂದಂತೂ ನಿಜ. ಒಟಿಟಿ ಮೂಲಕ ಚಿತ್ರಗಳನ್ನು ವೀಕ್ಷಿಸುತ್ತಿರುವ ಪ್ರೇಕ್ಷಕರು ಹೆಚ್ಚು ಹೆಚ್ಚು ಪ್ರೌಢರಾಗುತ್ತಿದ್ದಾರೆ. ಮಲಯಾಳ, ಮರಾಠಿ ಮುಂತಾದ ಭಾಷೆಗಳ ಚಿತ್ರಗಳ ವಸ್ತು, ನಿರೂಪಣೆ, ತಾಂತ್ರಿಕತೆಗಳನ್ನು ಮೆಚ್ಚುವ ಸಿನಿ ಪ್ರೇಕ್ಷಕರು ನಮ್ಮಲ್ಲಿ ಇಂತಹ ಚಿತ್ರಗಳೇಕೆ ಬರುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಅಂತಹ ಚಿತ್ರ ಅಲ್ಲೊಂದು ಇಲ್ಲೊಂದು ಕಾಣಿಸಿಕೊಂಡಾಗ ಭರಪೂರ ಉತ್ತೇಜನ ನೀಡಿದ್ದೂ ಇದೆ. ಅಲ್ಲಿ ಬಹುಶಃ ಹೊಸಬ, ಹಳಬ, ತಾರಾ ವರ್ಚಸ್ಸು ಎಲ್ಲವೂ ನಗಣ್ಯ. ಕಥಾವಸ್ತು ಮತ್ತು ನಿರೂಪಣೆೊಂಂದೇ ಮುಖ್ಯ.

ಚಲನಚಿತ್ರ ಮಾಧ್ಯಮದ ಅಧ್ಯಯನಾಸಕ್ತರಿಗೆ ಅನುಕೂಲವಾಗುವಂತಹ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಸಂಸ್ಥೆಯೊಂದರ ಅಗತ್ಯ ಇಲ್ಲಿ ಇದೆ. ಹೆಸರಘಟ್ಟದಲ್ಲಿ ಈಗ ಇರುವ ಸಂಸ್ಥೆಯನ್ನು ಉನ್ನತೀಕರಿಸಿ, ಅಲ್ಲೇ ಎಲ್ಲ ವಿಷಯಗಳನ್ನು ಕಲಿಸಬಹುದು. ಚಲನಚಿತ್ರ ಸಂಬಂಧಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು.

× Chat with us