ಸತ್ತಂತೆ ದಾಖಲೆ ಸೃಷ್ಟಿ; ವಿಮಾ ಹಣಕ್ಕೆ ಸ್ಕೆಚ್

ಮೈಸೂರು: ಹಣದಾಸೆ ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗುವಂತಹ ಘಟನೆ ನಡೆದಿದ್ದು, ಯುವಕನೊಬ್ಬ ತಾನೇ ಸತ್ತಂತೆ ದಾಖಲೆಗಳನ್ನು ಸೃಷ್ಠಿಸಿ ತನ್ನ ತಾಯಿಯ ಮೂಲಕ ವಿಮಾ ಹಣ ಪಡೆಯಲು ಯತ್ನಿಸಿ ಸಿಕ್ಕುಬಿದ್ದಿರುವ ಘಟನೆ ನಡೆದಿದೆ.

ವ್ಯಕ್ತಿಗೆ ದಿಢೀರ್‌ ಶ್ರೀಮಂತನಾಗುವ ಆಸೆ ಹುಟ್ಟಿಕೊಂಡಿದೆ. ಈ ಸಂಬಂದ ಕೆಲ ಸ್ನೇಹಿತರ ಬಳಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾನೆ. ಆಗ ಹುಟ್ಟಿಕೊಂಡದ್ದು ಮರಣ ವಿಮೆ ಮೂಲಕ ಹಣ ಮಾಡುವುದು. ಅದರಂತೆ ಆತ ಖಾಸಗಿ ಸಂಸ್ಥೆಗಳೆರಡರಲ್ಲಿ ಸುಮಾರು ೫ ಕೋಟಿ ರೂ. ಮರಣ ವಿಮೆ ಮಾಡಿಸಿದ್ದಾನೆ.

ಇದಾದ ಕೆಲ ದಿನಗಳ ಬಳಿಕ ತನ್ನ ತಾಯಿಯೊಂದಿಗೆ ಚರ್ಚೆ ನಡೆಸುತ್ತಾನೆ. ನಾನು ಸತ್ತು ಹೋಗಿದ್ದೇನೆ ಎಂದು ದಾಖಲೆಗಳನ್ನು ಸೃಷ್ಠಿಸಿಕೊಡುತ್ತೇನೆ. ನೀನು ಸ್ಥಳೀಯ ಪಂಚಾಯ್ತಿಯಲ್ಲಿ ಅವುಗಳನ್ನು ಸಲ್ಲಿಸಿ ಮರಣ ಪತ್ರ ಪಡೆದುಕೊಳ್ಳುವಂತೆ ಹೇಳುತ್ತಾನೆ.

ತಾಯಿಯೂ ಕೂಡ ಆತನಿಗೆ ಪ್ರೋತ್ಸಾಹ ನಡಿದ್ದಾರೆ ಎನ್ನಲಾಗಿದೆ. ನಂತರ ಆತ ಹೃದಯಾಘಾತದಿಂದ ಮೃತಪಟ್ಟಂತೆ ದಾಖಲೆಗಳನ್ನು ಒದಗಿಸಿದ್ದಾನೆ. ಆಕೆ ಆತ ಒದಗಿಸಿಕೊಟ್ಟ ದಾಖಲೆಗಳನ್ನು ಪಂಚಾಯ್ತಿಗೆ ನೀಡಿ ಮಗನ ಮರಣ ಪತ್ರವನ್ನೂ ಪಡೆದುಕೊಳ್ಳುತ್ತಾರೆ.

ಅಂದುಕೊಂಡಂತೆಯೇ ಎಲ್ಲವೂ ಆಗಿ ಇನ್ನೇನು ಎರಡು ಮೂರು ದಿನಗಳಲ್ಲಿ ಬ್ಯಾಂಕ್‌ನಿಂದ ವಿಮಾ ಹಣದ ಚೆಕ್‌ ಬರಬೇಕು. ಅಷ್ಟರಲ್ಲಿ ದೊಡ್ಡ ಮಟ್ಟದ ಸ್ಕೆಜ್‌ ಹಾಕಿದ್ದ ತಾಯಿ ಮಗನಿಗೆ ಆಘಾತವಾಗಿದೆ. ಬ್ಯಾಂಕ್‌ನವರಿಗೆ ಮೋಸದ ಜಾಲದ ಸುಳಿವು ಸಿಕ್ಕಿ, ಎಲ್ಲವೂ ತಲೆಕೆಳಗಾಗಿದೆ. ಇದೀಗ ತಾಯಿ ಮತ್ತು ಮಗನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.