ಚರಣ್‌ಜಿತ್ ಸಿಂಗ್ ಪಂಜಾಬ್‌ನ ನೂತನ ಸಿಎಂ!

ಚಂಡೀಗಢ : ಅಮರೀಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಧುರೀಣ ಚರಣ್‌ಜಿತ್ ಸಿಂಗ್ ಚನ್ನಿ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. 48 ವರ್ಷದ ಚರಣ್‌ಜಿತ್ ಈ ಹಿಂದೆ ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು.

ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಅವರು ಚರಣ್‌ಜಿತ್ ಸಿಂಗ್ ಅವರ ಹೆಸರನ್ನು ಟ್ವೀಟರ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಚರಣ್‌ಜಿತ್ ಸಿಂಗ್ ಚಮ್ಮೂರ್ ಸಾಹಿಬ್ ಕ್ಷೇತ್ರದ ಶಾಸಕ. ಮೂರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಸಮಿತಿ ಹಿರಿಯ ಸಚಿವ ಸುಖ್ಜಿಂದರ್ ಸಿಂಗ್ ಅವರನ್ನು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು ಎಂದು ವರದಿಯಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಚರಣ್‌ಜಿತ್ ಸಿಂಗ್ ಅವರ ಹೆಸರನ್ನು ಕೊನೆ ಕ್ಷಣದಲ್ಲಿ ಅಂತಿಮಗೊಳಿಸಿ ಘೋಷಣೆ ಮಾಡಿದೆ.

ರಾಹುಲ್ ಗಾಂಧಿ ಅವರ ಮನೆಯಲ್ಲಿ ಈ ಸಂಬಂಧ ಸುದೀರ್ಘ ಚರ್ಚೆ ನಡೆದಿತ್ತು. ಹಿರಿಯ ನಾಯಕಿ ಅಂಬಿಕಾ ಸೋನಿ ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನ ಪಂಜಾಬ್ ಘಟಕದಲ್ಲಿ ಆದ ಕೆಲ ಬೆಳವಣಿಗೆಗಳಿಂದ ಬೇಸತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ ಸಿಂಗ್ ಶನಿವಾರ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ರಾಜೀನಾಮೆಯ ಒಂದು ದಿನದ ನಂತರ, ಅಂದರೆ ಭಾನುವಾರ ಪಕ್ಷದ ಶಾಸಕರ ಸಭೆ ನಡೆದಿತ್ತು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಆಧರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಚರಣ್‌ಜಿತ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.