ಆಕ್ಸಿಜನ್ ದುರಂತ: ರೋಹಿಣಿ ಸಿಂಧೂರಿಗೆ ಕ್ಲೀನ್‌ಚಿಟ್‌; ಹಲವರ ಅಸಮಾಧಾನ

ಚಾಮರಾಜನಗರ: ಆಮ್ಲಜನಕ ದುರಂತ ಕುರಿತು ಸತ್ಯ ಶೋಧನೆಗೆ ಹೈಕೋರ್ಟ್ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ನೀಡಿರುವ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್‌ಚಿಟ್‌ ನೀಡಿರುವುದಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸತ್ಯ ಶೋಧನಾ ಸಮಿತಿಯಿಂದ ಪೂರ್ಣಪ್ರಮಾಣದ ಸತ್ಯಾಂಶ ಹೊರಬಂದಿಲ್ಲ. ಮೌಖಿಕ ಆದೇಶದ ಮೂಲಕ ಆಕ್ಸಿಜನ್‌ ತಡೆ ಹಿಡಿದ ಮೈಸೂರು ಜಿಲ್ಲಾಧಿಕಾರಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿಲ್ಲ. ಸಚಿವರಾದ ಡಿ.ಸುಧಾಕರ್‌ ಹಾಗೂ ಎಸ್‌.ಸುರೇಶ್‌ಕುಮಾರ್‌ ಅವರ ಪಾತ್ರವನ್ನೂ ಉಲ್ಲೇಖಿಸಿಲ್ಲ ಎಂದು ಜಿಲ್ಲೆಯ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕನ್ನಡ ಚಳವಳಿಗಾರ ಶಾ ಮುರಳಿ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಹಾಗೂ ಒಡನಾಟ ಇರುವುದರಿಂದ ಅವರ ಹೆಸರನ್ನು ಕೈಬಿಡಲಾಗಿದೆ. ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿದ್ದರೆ ಸತ್ಯಾಂಶ ಹೊರಬರುತ್ತಿತ್ತು. ನಿವೃತ್ತ ನ್ಯಾಯಮೂರ್ತಿಗಳಿಗೆ ಒತ್ತಡ ಹಾಕುವ ಸಾಧ್ಯತೆಗಳಿರುತ್ತವೆ ಎಂದು ಅವರು ಹೇಳಿದರು.

ಮೌಖಿಕ ಆದೇಶದ ಮೂಲಕ ಜಿಲ್ಲೆಗೆ ಬರಬೇಕಿದ್ದ ಆಕ್ಸಿಜನ್‌ ತಡೆ ಹಿಡಿದ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರದು ಶೇ 25ರಷ್ಟು ತಪ್ಪಿದೆ ಹಾಗಾಗಿ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಕಡ್ಡಾಯ ರಜೆ ಮೇಲೆ ಕಳುಹಿಸಬೇಕು. ಅವರ
ಮೊಬೈಲ್‌ ಹಾಗೂ ದೂರವಾಣಿಗಳ ಕರೆಗಳ ವಿವರವನ್ನು ಕಲೆಹಾಕಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಮುಕ್ತವಾದ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಜಯಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಒತ್ತಾಯಿಸಿದರು.

ಮೈಸೂರು ಜಿಲ್ಲಾಧಿಕಾರಿಗೆ ಕ್ಲೀನ್‌ಚಿಟ್‌ ನೀಡಿದ್ದು ಸರಿಯಲ್ಲ. ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಕೇವಲ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ತಪ್ಪಿತಸ್ಥರಲ್ಲ. ಘಟನೆಗೆ ಆರೋಗ್ಯ ಸಚಿವ ಡಿ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಹಾಗೂ ಸರ್ಕಾರವೂ ನಿರ್ಲಕ್ಷ್ಯವೂ ಕೂಡ ಕಾರಣವಾಗಿದೆ ಹಾಗಾಗಿ ಸಮಗ್ರ ತನಿಖೆ ನಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಬದಲಾಯಿಸಿ ಸ್ಥಳೀಯ ನಾಯಕರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿದರು.

× Chat with us