ಚಾಮರಾಜನಗರದಲ್ಲಿ 4 ದಿನ ದಸರಾ ಆಚರಣೆ: ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು: ಅ.7 ರಿಂದ ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ದಸರಾ ಆಚರಣೆಗೆ ಸಿದ್ಧತೆ ಕೈಗೊಳ್ಳುವಂತೆ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಾಮರಾಜನಗರ ದಸರಾ 2021 ಆಚರಣೆ ಸಂಬಂಧ ವಿಧಾನಸೌಧದ ಸಭಾಂಗಣದಲ್ಲಿ ನಡೆದ ದಸರಾ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಸಚಿವರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷಿತವಾಗಿ ದಸರಾ ಆಚರಣೆ ಮಾಡುವಂತೆ ಸೂಚಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ದಸರಾ ಆಚರಣೆಯಲ್ಲಿ ಕಲಾವಿದರು ಅವಕಾಶದಿಂದ ವಂಚಿತರಾಗಿದ್ದಾರೆ. ಈ ಬಾರಿಯಾದರೂ ಕಲಾವಿದರಿಗೆ ಅವಕಾಶ ಕೂಡಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದಸರಾ ಹಿನ್ನೆಲೆಯಲ್ಲಿ ದೀಪಾಲಂಕಾರದ ಖರ್ಚು, ವೆಚ್ಚವನ್ನು ಚೆಸ್ಕಾಂನವರು ವಹಿಸಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ದಸರಾ ಆಚರಣೆ ಮಾಡಬೇಕು. ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿಧಿಗಳ ಸಲಹೆಯನ್ನು ಪರಿಗಣನೆಗೆ ತೆಗೆದುಕೊಂಡು ದಸರಾ ಆಚರಣೆ ಮಾಡಬೇಕು ಎಂದರು.

ಅ.7 ರಂದು ನಿಗದಿತ ಮುಹೂರ್ತದಲ್ಲಿ ದಸರಾ ಉತ್ಸವ ಆರಂಭವಾಗಲಿ. ರಾಷ್ಟಪತಿ ಅವರು ಆಗಮಿಸುವ ಸಾಧ್ಯತೆಯಿರುವುದರಿಂದ ಯಾವುದೇ ಲೋಪವಾಗಬಾರದು. ಎಲ್ಲಾ ಸಿದ್ಧತೆ ಮಾಡಿಕೊಂಡು ಜಿಲ್ಲಾ ಕೇಂದ್ರದಲ್ಲಿ ದಸರಾ ಆಚರಣೆ ಮಾಡಬೇಕು ಎಂದು ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು, ದಸರಾ ಆಚರಣೆಗೆ 50 ಲಕ್ಷ ರೂ. ಅಂದಾಜು ವೆಚ್ಚ ಸಿದ್ಧಪಡಿಸಲಾಗುವುದು. ವಿದ್ಯುತ್ ವೆಚ್ಚವನ್ನು ಚೆಸ್ಕಾಂನವರು ವಹಸಿಕೊಂಡರೆ ದಸರಾ ಆಚರಣೆಗೆ ಯಾವುದೇ ಹಣದ ಕೊರತೆಯಾಗುವುದಿಲ್ಲ ಎಂದರು.

ಜಿಲ್ಲಾ ಕೇಂದ್ರದಲ್ಲಿ ದೀಪಾಲಂಕಾರ ಮಾಡುವುದರ ಜೊತೆಗೆ ತಾಲೂಕು ಕೇಂದ್ರಗಳಲ್ಲಿ ಖಾಸಗಿ ಅವರ ಸಹಕಾರದೊಂದಿಗೆ ದೀಪಾಲಂಕಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಶಾಸಕರಾದ ನಿರಂಜನ್ ಕುಮಾರ್, ಎನ್.ಮಹೇಶ್, ಪುಟ್ಟರಂಗಶೆಟ್ಟಿ, ನರೇಂದ್ರ, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.

× Chat with us