ರಜಾ ದಿನಗಳಿಗಾಗಿ ಕಾಯದೆ ಎಲ್ಲಾ ಸಮಯದಲ್ಲೂ ಕ್ರೀಡೆಗಳಲ್ಲಿ ತೊಡಗಬೇಕು : ಅನುರಾಗ್‌ ಠಾಕೂರ್‌

ಬೆಂಗಳೂರು: ವಾರಾಂತ್ಯ, ರಜಾ ದಿನಗಳಿಗಾಗಿ ಕಾಯದೆ ಎಲ್ಲಾ ಸಮಯದಲ್ಲೂ ಕ್ರೀಡೆಗಳಲ್ಲಿ ತೊಡಗಬೇಕು ಎಂದು ಪಡುಕೋಣೆ-ದ್ರಾವಿಡ್‌ ಕ್ರೀಡಾ ಶ್ರೇಷ್ಠತಾ ಕೇಂದ್ರ(ಸಿಎಸ್‌ಇ)ದ ವಿದ್ಯಾರ್ಥಿಗಳಿಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌  ಅವರು ಸಲಹೆ ನೀಡಿದರು. ಯಲಹಂಕದಲ್ಲಿರುವ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಕಾಡೆಮಿಯಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅನುಕೂಲವಾಗುವಂತೆ ಹೆಚ್ಚಿನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಟೀಂ ಇಂಡಿಯಾ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ , ಬ್ಯಾಡ್ಮಿಂಟನ್‌ ಅಕಾಡೆಮಿಯ ಮುಖ್ಯ ತರಬೇತುದಾರ ವಿಮಲ್‌ ಕುಮಾರ್‌, ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಕುಮಾರ್‌, ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಅಕಾಡೆಮಿಯು 15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ಬ್ಯಾಡ್ಮಿಂಟನ್‌, ಕ್ರಿಕೆಟ್‌, ಫುಟ್‌ಬಾಲ್, ಟೆನಿಸ್‌, ಈಜು, ಬಾಸ್ಕೆಟ್‌ಬಾಲ್ ಮತ್ತು ಶೂಟಿಂಗ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿದೆ.