ನೀರಿನ ಮೇಲೆ ಚಲಿಸುವ ಕಾರು ಮಾದರಿಯ ಪವರ್ ಬೋಟ್!

ಕೈರೋ: ಜೇಮ್ಸ್ ಬಾಂಡ್ ಸಿನಿಮಾವನ್ನು ನೆನಪಿಸುವ ಈ ದೃಶ್ಯ ಕಂಡು ಬಂದಿದ್ದು ಈಜಿಪ್ಟ್‌ನ ಉತ್ತರ ಕರಾವಳಿ ಪ್ರದೇಶದಲ್ಲಿ. ನೀರಿನ ಮೇಲೆ ಚಲಿಸುವ ಕಾರು ಆಕಾರದ ವಾಹನವನ್ನು ಇದೇ ಪ್ರಪ್ರಥಮ ಬಾರಿಗೆ ಸ್ಥಳೀಯವಾಗಿ ನಿರ್ಮಿಸಲಾಗಿದೆ. ಕಾರು ಮಾದರಿಯ ಈ ಪವರ್ ಬೋಟ್ ಜಲಕ್ರೀಡಾ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ಮೂವರು ಮಿತ್ರರು ಈ ಜಲವಾಹನವನ್ನು ತಯಾರಿಸಿದ್ದು, ಜಪಾನ್ ಎಂಜಿನ್ ಹೊರತುಪಡಿಸಿ ಉಳಿದೆಲ್ಲ ವಸ್ತುಗಳು ಸ್ಥಳೀಯ ಮೂಲದ್ದಾಗಿವೆ. ಈ ಸ್ಥಳೀಯ ಪ್ರತಿಭೆಗಳ ಕಾರು ಆಕಾರದ ಪವರ್ ಬೋಟ್‌ಗೆ ಪ್ರವಾಸಿಗರು ಮತ್ತು ಜಲಕ್ರೀಡಾಸಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸ್ನೇಹಿತರು ಇದುವರೆಗೆ 12 ಕಾರ್ ಮಾದರಿಯ ಪವರ್‌ಬೋಟ್‌ಗಳನ್ನು ನಿರ್ಮಿಸಿದ್ದು, ಈ ವಾಹನವನ್ನು ಅನಾವರಣಗೊಳಿಸುತ್ತಿದ್ದಂತೆ ಆನೇಕ ಆರ್ಡರ್‌ಗಳು ಬರತೊಡಗಿವೆ.

ʻಈ ವಾಹನದ ಮೊದಲ ವಿಡಿಯೊ ಬಿಡುಗಡೆಯಾದ ನಂತರ ನನಗೆ ಉತ್ತಮ ಆರ್ಡರ್‌ಗಳು ಸ್ವೀಕೃತವಾಗಿವೆ. ನಾನು ಮೊದಲಿಗೆ ಮಾರ್ಸಾ ಮಥ್ರೌ ಕರಾವಳಿ ಪ್ರದೇಶದಲ್ಲಿ ಕಾರ್ ಪವರ್ ಬೋಟ್‌ನನ್ನು ಅನಾವರಣಗೊಳಿಸಿದೆ. ನಂತರ ನಾನು ಇದನ್ನು ವಿಸ್ತರಿಸಲು ಉತ್ತರ ಕರಾವಳಿ ತೀರಕ್ಕೆ ಬಂದೆ. ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿದೆ. ಕೆಂಪು ಸಮುದ್ರ ಮತ್ತು ಈಜಿಪ್ಟ್ ಹೊರಗೂ ಇದನ್ನು ವಿಸ್ತರಿಸಲು ನಾನು ಬಯಕೆ ಹೊಂದಿದ್ದೇನೆʼ ಎನ್ನುತ್ತಾರೆ ವಾಹನದ ಅನ್ವೇಷಕ ಮತ್ತು ವಿನ್ಯಾಸಗಾರರಲ್ಲಿ ಒಬ್ಬರಾದ ಕರೀಂ ಅಮಿನ್.

ಪ್ರತಿ ಕಾರ್ ಪವರ್ ಬೋಟ್ ನಿರ್ಮಿಸಲು ಮೂರು ವಾರಗಳು ಬೇಕು. ಇದರ ಬೆಲೆ 19,181 ಡಾಲರ್‌ಗಳಿಂದ 44,757 ಡಾಲರ್‌ಗಳಾಗುತ್ತದೆ.

ಭೂಮಿ ಮತ್ತು ನೀರಿನ ಮೇಲೆ ಚಲಿಸುವ ಹೊಸ ಮಾದರಿಯ ವಾಹನವನ್ನು ಅಭಿವೃದ್ಧಿಗೊಳಿಸಲು ಅಮಿನ್ ಮತ್ತು ಗೆಳೆಯರು ಯೋಜನೆ ರೂಪಿಸಿದ್ದಾರೆ. ಸಾಗರೋತ್ತರ ಮಾರುಕಟ್ಟೆಗಳಿಗೂ ತಮ್ಮ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಇವರದ್ದು.

× Chat with us