ಕೇರಳದಲ್ಲಿ 15 ಮಂದಿಗೆ ಝಿಕಾ ವೈರಸ್ ದೃಢ: ರಾಜ್ಯದಲ್ಲಿ ಆತಂಕ

ತಿರುವನಂತಪುರಂ(ಕೇರಳ): ಕೋವಿಡ್ ಸೋಂಕಿನ ಮೂರನೇ ಅಲೆ ಭೀತಿಯ ಮಧ್ಯೆಯೇ ಕೇರಳದಲ್ಲಿ ಝಿಕಾ ವೈರಸ್ ಮತ್ತೆ ಸದ್ದುಮಾಡಿದ್ದು, ರಾಜ್ಯದಲ್ಲೂ ಆಂತಕ ಮೂಡಿಸಿದೆ.

ಕೇರಳದಲ್ಲಿ ಒಟ್ಟು 15 ಮಂದಿಗೆ ಝಿಕಾ ವೈರಸ್ ಸೋಂಕು ತಗುಲಿದೆ. ಈ ಸೋಂಕು ಸೊಳ್ಳೆಗಳಿಂದ ಹರಡುವ ಕಾರಣ ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ.

ತಿರುವನಂಪುರಂನ ಪರಶಾಲದ 24 ವರ್ಷದ ಗರ್ಭಿಣಿಯಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿತ್ತು. ಜ್ವರ, ತಲೆನೋವು, ಚರ್ಮದ ಮೇಲೆ ಕೆಂಪು ಗುರುತುಗಳಂಥ ರೋಗ ಲಕ್ಷಣ ಹೊಂದಿರುವ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯಿಂದ ಸಂಗ್ರಹಿಸಿದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಲಾಗಿದೆ.

ಮಹಿಳೆಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರು ಸೇರಿದಂತೆ 19 ಜನರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಲಾಗಿದ್ದು, 15 ಜನರಿಗೆ ಸೋಂಕು ದೃಢಪಟ್ಟಿದೆ.

ಝಿಕಾ ವೈರಸ್‌ನ ಲಕ್ಷಣಗಳು: ಜ್ವರ, ಚರ್ಮ ಸಂಬಂಧಿ ಕಾಯಿಲೆಗಳು, ಸ್ನಾಯು-ಕೀಲು ನೋವು, ಸುಸ್ತು, ತಲೆನೋವು

ರಾಜ್ಯದಲ್ಲೂ ಆತಂಕ: ಝಿಕಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯದ ಜನರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಕೋವಿಡ್‌ನಿಂದ ತತ್ತರಿಸಿರುವ ಜನತೆಗೆ ಝಿಕಾ ಮತ್ತೊಂದು ಆಘಾತ ನೀಡಿದೆ.

× Chat with us