ಯುವರಾಜ್‌ಗೂ ಆರ್‌ಎಸ್‌ಎಸ್‌ಗೂ‌ ಯಾವುದೇ ಸಂಬಂಧವಿಲ್ಲ: ಮಾ.ವೆಂಕಟರಾಮು

ಮೈಸೂರು: ಯುವರಾಜ್‌ ಎಂಬ ವ್ಯಕ್ತಿ ಆರ್‌ಎಸ್‌ಎಸ್‌ನವನಲ್ಲ. ಅವನಿಗೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಮಾ.ವೆಂಕಟರಾಮು ತಿಳಿಸಿದರು.

ನಗರದ ಪತ್ರಕರ್ತರಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವರಾಜ್ ತಾನೊಬ್ಬ ಆರ್‌ಎಸ್‌ಎಸ್‌ ಮುಖಂಡನೆಂದು ಹೇಳಿಕೊಂಡು ಹಲವರು ಗಣ್ಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನನ್ನ ಜೀವಮಾನದಲ್ಲಿ ಅವನನ್ನು ನೋಡಿಲ್ಲ. ನಮ್ಮ ಸಂಘಕ್ಕೆ ಮಸಿ ಬಳಿಯುವುದಕ್ಕೆ ನಡೆದಿರುವ ಷಡ್ಯಂತ್ರ ಇದು. ಸಾರ್ವಜನಿಕರು ಇಂತಹ ಮೋಸಗಾರರಿಗೆ ಬಲಿಯಾಗಬಾರದು ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಟ್ರಸ್ಟ್‌ನ ಕರ್ನಾಟಕದ ಸಹ ಪ್ರಮುಖ್ ಬಸವರಾಜು ಮಾತನಾಡಿ, ರಾಮ ಜನ್ಮಭೂಮಿಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕಾಗಿ ಜ.15ರಿಂದ ಫೆ.27ರವರೆಗೆ ನಿಧಿ ಸಮರ್ಪಣಾ ನಡೆಸಲಾಗುತ್ತಿದೆ. ರಾಜ್ಯಾದ್ಯಂತ 27,500 ಗ್ರಾಮಗಳಲ್ಲಿ ನಿಧಿ ಸಂಗ್ರಹಿಸಲಾಗುವುದು. ಕರ್ನಾಟಕದಲ್ಲಿ 90 ಲಕ್ಷ ಹಿಂದೂಗಳ ಮನೆ ತಲುಪುವ ಗುರಿ ಹೊಂದಲಾಗಿದೆ. ಕೂಪನ್‌ಗಳನ್ನು ನೀಡಿ ಧನ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. 10, 100, 1,000 ರೂ.ಗಳ ಕೂಪನ್ ಮೂಲಕ ಧನ ಸಂಗ್ರಹ ಮಾಡಲಾಗುವುದು. 2,000 ರೂ. ಅಥವಾ ಅದಕ್ಕಿಂತ ಹೆಚ್ಚು ಹಣ ಅರ್ಪಿಸಿದವರಿಗೆ ರಸೀದಿ ನೀಡಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಹಣ ಪಡೆಯದೇ ರಾಮಮಂದಿರ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ ಎಂದು ವಿವರಿಸಿದರು.

ದೇಶದ ಪ್ರತಿಯೊಬ್ಬ ರಾಮಭಕ್ತರಿಂದಲೇ ಹಣ ಸಂಗ್ರಹಿಸಿ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕರ್ನಾಟದಕಲ್ಲಿ ನಿಧಿ ಸಂಗ್ರಹಕ್ಕಾಗಿ 5 ಕಾರ್ಯಕರ್ತರನ್ನೊಳಗೊಂಡ 28 ಸಾವಿರ ತಂಡಗಳು ರಚಿಸಲಾಗುವುದು. ಹಣ ಸಂಗ್ರಹಣೆ ಹಾಗೂ ಖಾತೆಗೆ ಜಮಾವಣೆ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಇರಲಿದೆ ಎಂದು ಮಾಹಿತಿ ನೀಡಿದರು.

× Chat with us