ದೇವಸ್ಥಾನದ ಬಳಿ ಮಚ್ಚಿನಿಂದ ಹಲ್ಲೆ ನಡೆಸಿ ಯುವಕನ ಹತ್ಯೆ!

ಹಲಗೂರು: ಸಾರಿಗೆ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಮಾಸ್ತಮ್ಮ ದೇವಸ್ಥಾನದ ಬಳಿ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ಮುಚ್ಚುಮರೆಗೌಡ ಅವರ ಪುತ್ರ ರಾಜುಗೌಡ (36) ಹತ್ಯೆಯಾದ ವ್ಯಕ್ತಿ.

ರಾಜುಗೌಡ ಬೆಂಗಳೂರು ಖಾಸಗಿ ಗಾರ್ಮೆಂಟ್ಸ್‌ನ ವಾಹನ ಚಾಲಕ ಕಂ ಮಾಲೀಕನಾಗಿ ಕೆಲಸ ನಿರ್ವಹಿಸುತ್ತಿದ್ದನು.

ಮಂಗಳವಾರ ರಾತ್ರಿ ಮಾಸ್ತಮ್ಮ ದೇವಸ್ಥಾನ ಬಳಿ ದುಷ್ಕರ್ಮಿಗಳು ಲಾಂಗು, ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜುಗೌಡನನ್ನು ಕೆ.ಎಂ.ದೊಡ್ಡಿಯ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್, ಹಲಗೂರು ವೃತ್ತದ ವೃತ್ತ ನಿರೀಕ್ಷಕ ಧನರಾಜ್ ಹಾಗೂ ಆರಕ್ಷಕ ಉಪ ನಿರೀಕ್ಷಕ ಮಾರುತಿ ತಮ್ಮಣ್ಣ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

× Chat with us