ಎಚ್‌.ಡಿ.ಕೋಟೆ: ಮದುವೆಗೆ ಬಟ್ಟೆ ತರಲು ಹೋದವ ಅಪಘಾತದಲ್ಲಿ ಸಾವು!

ಎಚ್.ಡಿ.ಕೋಟೆ: ಗೂಡ್ಸ್ ವಾಹನಕ್ಕೆ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪ ಪುರ ಗ್ರಾಮದ ಬಳಿ ನಡೆದಿದೆ.

ಸರಗೂರು ತಾಲ್ಲೂಕಿನ ತೆರಣಿಮುಂಟಿ ಗ್ರಾಮದ ನಾಗರಾಜು ಎಂಬುವವರ ಮಗ ಲೋಕೇಶ್ (30) ಮೃತ ದುರ್ದೈವಿ. ಲೋಕೇಶ್ ಎಂಬುವವರಿಗೆ ಮದುವೆ ನಿಶ್ಚಯವಾಗಿದ್ದರಿಂದ ಅವರು ಅದೇ ಗ್ರಾಮದ ತನ್ನ ಸ್ನೇಹಿತ ನಾಗಶೆಟ್ಟಿ ಎಂಬುವವರ ಮಗ ಶಂಕರ (30) ಎಂಬುವವರೊಂದಿಗೆ ಮದುವೆಗೆ ಬಟ್ಟೆ ತರಲೆಂದು ಬೈಕ್‍ನಲ್ಲಿ ಮೈಸೂರಿಗೆ ತೆರಳಿದ್ದಾರೆ.

ಬಟ್ಟೆಯನ್ನು ಖರೀದಿ ಮಾಡಿ ಮಧ್ಯಾಹ್ನ ಸ್ವ ಗ್ರಾಮಕ್ಕೆ ಹಿಂದುರುಗವ ವೇಳೆ ತಾಲ್ಲೂಕಿನ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯ ಪುರ ಗ್ರಾಮದ ಕೆರೆ ತಿರುವಿನಲ್ಲಿ ಈ ಅಫಘಾತ ಸಂಭವಿಸಿದ್ದು, ಹಂಪಾಪುರ ಮಾರ್ಗವಾಗಿ ಜಯಪುರ ಕಡೆ ಹೋಗುತ್ತಿದ್ದ ಟಾಟಾ ಏಸ್ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಡಿಕ್ಕಿಯ ರಭಸಕ್ಕೆ ನೆಲಕ್ಕೆ ಬಿದ್ದ ಲೋಕೇಶನ ತಲೆಗೆ ತೀವ್ರವಾದ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ. ಮತ್ತೊಬ್ಬ ಸವಾರ ಶಂಕರನಿಗೂ ತೀವ್ರವಾದ ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಆತನನ್ನು ತುರ್ತು ವಾಹನದ ಮೂಲಕ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಮೃತ ಲೋಕೇಶ್ ಎಂಬುವವರಿಗೆ ಗುರವಾರ ಹುಣಸೂರು ತಾಲ್ಲೂಕಿನ ಹುಡುಗಿ ಜೊತೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಮದುವೆಯ ತಯಾರಿಯಲ್ಲಿದ್ದ ಲೋಕೇಶ್ ತನ್ನ ಮದುವೆಗೆ ಹೊಸ ಬಟ್ಟೆ ಖರೀದಿ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ. ಮೃತನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಚ್.ಡಿ.ಕೋಟೆ ಪೋಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಎಚ್.ಡಿ.ಕೋಟೆ ಶವಗಾರಕ್ಕೆ ಸಾಗಿಸಿದ್ದಾರೆ.

ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

× Chat with us