ಶಾಸಕ ಎನ್.ಮಹೇಶ್ ಪಿಎ ಹೆಸರಲ್ಲಿ ವಂಚಿಸುತ್ತಿದ್ದ ಯುವಕ ಬಂಧನ

ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಸುಳ್ಳು ಹೇಳಿ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರಿಂದ 50 ಸಾವಿರ ಹಣ ಪಡೆದಿದ್ದ ಯುವಕನನ್ನು ಕೊಳ್ಳೇಗಾಲದ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಗೌಡನನ್ನು (23) ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಆರೋಪಿ ಸಚಿನ್ ಗೌಡ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಜುಲೈ 2ರಂದು ಕರೆ ಮಾಡಿ, ತಾನು ಶಾಸಕ ಎನ್.ಮಹೇಶ್ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡಿದ್ದರು. ಮರುದಿನ ಶಾಸಕಿಗೆ ಮತ್ತೆ ಕರೆ ಮಾಡಿ, ಶಾಸಕರಿಗೆ 50 ಸಾವಿರ ತುರ್ತು ಹಣ ಬೇಕಾಗಿದೆ ಎಂದು ಹೇಳಿದ್ದರು. ಇದನ್ನು ನಂಬಿದ್ದ ರೂಪಾಲಿ ನಾಯ್ಕ ಅವರು ಆನ್‌ಲೈನ್ ಮೂಲಕ ಹಣವನ್ನು ಸಚಿನ್ ಗೌಡ ಖಾತೆಗೆ ಜಮೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹೇಶ್ ಅವರ ಆಪ್ತ ಸಹಾಯಕ ಮಹದೇವಸ್ವಾಮಿ ಅವರು ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

× Chat with us