ಮದ್ದೂರು : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಯುವಕ ಕೊಲೆಯಾಗಿರುವ ಘಟನೆ ಬೋ ರಾಪುರ ಕಾಲೋನಿಯಲ್ಲಿ ನಡೆದಿದೆ.
ಚಿಕ್ಕರಸಿನಕೆರೆ ಗ್ರಾಮದ ರಾಜೇಂದ್ರ ಅವರ ಪುತ್ರ ಪುನೀತ್ (25) ಕೊಲೆಯಾದ ಯುವಕ.
ಕೊಲೆಯಾದ ಯುವಕ ಪುನೀತ್ ಮತ್ತು ಆತನ ಕೆಲವು ಸ್ನೇಹಿತರು ಐಪಿಎಲ್ನ ಸೀಜನ್ ಆರಂಭದಿಂದಲೂ ಯಾವ ತಂಡ ಗೆಲ್ಲುತ್ತದೆ, ಯಾವುದು ಸೋಲುತ್ತದೆ ಎಂದು ವಿವಿಧ ಆಯಾಮಗಳಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ವಿವರ : ಐಪಿಎಲ್ ಬೆಟ್ಟಿಂಗ್ನಲ್ಲಿ ಪುನೀತ್ ಹೆಚ್ಚು ಆಟಗಳಲ್ಲಿ ಗೆದ್ದಿದ್ದ. ಇದರ ಹಣವನ್ನು ಕೊಡುವಂತೆ ಶರತ್, ಮಂಜು, ಸತೀಶ್ ಮತ್ತಿತರರನ್ನು ಕೇಳಿದಾಗ ತಾವು ಇದ್ದಲ್ಲಿಗೆ ಬರುವಂತೆ ಹೇಳಿದ್ದಾರೆ. ತನ್ನ ಸ್ನೇಹಿತರ ಜತೆ ಗುರುವಾರ ಸಂಜೆ ಬೆಟ್ಟಿಂಗ್ ಹಣ ಪಡೆಯಲು ತನ್ನ ಸ್ನೇಹಿತರಾದ ನಿತ್ಯಾನಂದ, ಅನಿಲ್ ಅವರೊಂದಿಗೆ ಬೋರಾಪುರ ಗೇಟ್ ಬಳಿಯ ಕಾಲುವೆಯ ರಸ್ತೆಗೆ ಹೋಗಿದ್ದ ವೇಳೆ ಹಣ ನೀಡೋಕೆ ಶರತ್ ಮತ್ತು ಆತನ ಸ್ನೇಹಿತರು ಒಪ್ಪಲಿಲ್ಲ. ಈ ಸಂದರ್ಭ ಮಾತಿಗೆ ಮಾತು ಬೆಳೆದು 10 ಮಂದಿ ಯುವಕರು ದೊಣ್ಣೆ, ಕಲ್ಲು ಮತ್ತಿತರ ವಸ್ತುಗಳಿಂದ ಪುನೀತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ನನ್ನು ಆತನ ಸ್ನೇಹಿತರು ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಪರಿಣಾಮ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಮೃತಪಟ್ಟಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಡಿವೈಎಸ್ಪಿ ನವೀನ್ಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಸ್.ಎಂ.ಸತೋಷ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಮಿಂಚಿನ ಕಾರ್ಯಾಚರಣೆ ನಡೆಸಿದ ಮದ್ದೂರು ಪೊಲೀಸರು, ಕೊಲೆ ಆರೋಪಿಗಳಾದ ಮಂಜ, ಸುಮಂತ್, ದಿನೇಶ್, ಸೀನಾ, ಶ್ರೀಧರ, ಸತೀಶ್, ಮನು, ಮಂಜ, ಮನೋಜ್ ಒಳಗೊಂಡಂತೆ ಒಟ್ಟು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತನ ಸಹೋದರ ದಿಲೀಪ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.