ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದ ಮೈಸೂರು ವಿವಿ ಯ ಸಹಾಯಕ ಪ್ರಾಧ್ಯಾಪಕರು

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಅಣುಜೀವವಿಜ್ಞಾನ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಸಿ.ಡಿ.ಮೋಹನ್ ಅವರು ಪ್ರೊ. ಎಚ್.ಎಸ್.ಶ್ರೀವಾಸ್ತವ ಫೌಂಡೇಶನ್-ಯಂಗ್ ಸೈಂಟಿಸ್ಟ್ ಪ್ರಶಸ್ತಿಗೆ (2020-21) ಆಯ್ಕೆಯಾಗಿದ್ದಾರೆ.

ಡಾ.ಮೋಹನ್ ಅವರು ಪ್ರೊ.ಕೆ.ಎಸ್. ರಂಗಪ್ಪ, ವಿಶ್ರಾ೦ತ ಕುಲಪತಿಗಳು, ಮೈಸೂರು ವಿಶ್ವವಿದ್ಯಾನಿಲಯ ಅವರ ಮಾರ್ಗದರ್ಶನದಲ್ಲಿ ಔಷಧೀಯ ಗುಣಲಕ್ಷಣಗಳನ್ನು ಹೊಂದಿರುವ ರಾಸಾಯನಿಕಗಳು ಕಂಡುಹಿಡಿಯುವ ಬಗ್ಗೆ ಸಂಶೋಧನೆ ನಡೆಸುತಿದ್ದಾರೆ. ಡಾ. ಮೋಹನ್ ಅವರು ಇತ್ತೀಚೆಗೆ ನ್ಯಾಷನಲ್ ಅಕಾಡೆಮಿ ಆಫ್ಸೈನ್ಸಸ್, ಇಂಡಿಯಾದಿಂದ NASI-ಪ್ಲಾಟಿನಂ ಜುಬಿಲಿ ಯುವವಿಜ್ಞಾನಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಪರಿಸರ ಅಥವಾ ಕೃಷಿಯ ಉದಯೋನ್ಮುಖ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವವಿಜ್ಞಾನಿಗಳಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು PHSS ಪ್ರತಿಷ್ಠಾನವು ದ್ವೈವಾರ್ಷಿಕವಾಗಿ ನೀಡಲಾಗುತ್ತದೆ. ಈ ಪ್ರಶಸ್ತಿಯೊಂದಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ರೂ. 15,000/- ಮತ್ತು ಪ್ರತಿಷ್ಠಾನದ ಆಜೀವ ಸದಸ್ಯತ್ವ ನೀಡಲಾಗುವುದು. ನಮ್ಮ ದೇಶದ ಅನೇಕ ಗಣ್ಯವ್ಯಕ್ತಿಗಳು PHSS ಪ್ರತಿಷ್ಠಾನದ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ಯುವ ಅಧ್ಯಾಪಕರು ಇಂತಹ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದು ಅನೇಕ ಯುವಕರನ್ನು ವೈಜ್ಞಾನಿಕ ಸಂಶೋಧನೆಗೆ ಪ್ರೇರೇಪಿಸುತ್ತದೆ ಮತ್ತು ಈ ಪ್ರಶಸ್ತಿಯು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಾಪ್ತವಾಗಿರುವುದು ಹೆಮ್ಮೆಯ ವಿಷಯವೆಂದು ಕೆ.ಎಸ್ ರಂಗಪ್ಪ ಅವರು ತಿಳಿಸಿದ್ದಾರೆ.

× Chat with us