ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಮಹಿಳೆಯ ಬರ್ಬರ ಹತ್ಯೆ

ಕೆ.ಆರ್.ಪೇಟೆ: ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಕೊಡಲಿಯಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಹುಣಸನಹಳ್ಳಿ ಗ್ರಾಮದ ಕಾಳಯ್ಯ ಅವರ ಪತ್ನಿ ದೊಡ್ಡತಾಯಮ್ಮ (55) ಕೊಲೆಯಾದ ಮಹಿಳೆ. ಅದೇ ಗ್ರಾಮದ ಕುಮಾರ್ ಅವರ ಮಗ ವಾಸು (30) ಕೊಲೆ ಮಾಡಿರುವ ಆರೋಪಿ.

ದೊಡ್ಡತಾಯಮ್ಮ ಅವರ ಸೊಸೆಯೊಂದಿಗೆ ವಾಸು ಅನೈತಿಕ ಸಂಬಂಧ ಹೊಂದಿದ್ದನು ಎಂದು ಹೇಳಲಾಗಿದೆ. ಇದನ್ನು ವಿರೋಧಿಸಿ ಮನೆಗೆ ಬರಬೇಡ ಎಂದು ವಾಸು ಅವರಿಗೆ ಹಲವು ಬಾರಿ ತಿಳುವಳಿಕೆ ನೀಡಿದ್ದರು. ಇದರಿಂದ ಆರೋಪಿ ವಾಸು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ದೊಡ್ಡತಾಯಮ್ಮ ಅವರನ್ನು ಮಂಗಳವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ, ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್, ಸಿಪಿಐ ಎಂ.ಕೆ. ದೀಪಕ್, ಸಬ್ ಇನ್‌ಸ್ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಕುರಿತು ಕೆ.ಆರ್.ಪೇಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಾಸು ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

× Chat with us