ಉತ್ತರ ಕನ್ನಡ: 10 ತಿಂಗಳಲ್ಲಿ ಬರೋಬ್ಬರಿ 232 ನಾಪತ್ತೆ ಪ್ರಕರಣಗಳು ದಾಖಲು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದೀಚಿಗೆ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಈ ವರ್ಷದ 10 ತಿಂಗಳಲ್ಲೇ ಬರೋಬ್ಬರಿ 232 ನಾಪತ್ತೆ ಪ್ರಕರಣಗಳು ದಾಖಲಾಗಿವೆ‌.

ನಾಪತ್ತೆ ಪ್ರಕರಣದಲ್ಲಿ ಹೆಚ್ಚಾಗಿ ಮಹಿಳೆಯರು, ಯುವತಿಯರು ಹೆಚ್ಚಾಗಿದ್ದಾರೆನ್ನುವುದು ಆತಂಕದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಕೋವಿಡ್​ಗೂ ಮುಂಚೆ, ಅಂದರೆ 2019ರಲ್ಲಿ 257 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿದ್ದವು. ಕೋವಿಡ್ ಸಮಯದಲ್ಲಿ (2020) ಲಾಕ್ ಡೌನ್ ಇದ್ದರೂ ಕೂಡ 212 ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದರಲ್ಲಿ 197 ಮಂದಿ ಪತ್ತೆಯಾಗಿದ್ದು, 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ. ಈ ಎರಡು ವರ್ಷದಲ್ಲಿ ನಾಪತ್ತೆ ಪ್ರಕರಣದ ಅಂಕಿ- ಅಂಶ ಸಾಧಾರಣವಾಗಿತ್ತೆಂದು ಪರಿಗಣಿಸಿದರೆ, 2021 ಅಂದರೆ ಪ್ರಸ್ತುತ ವರ್ಷದ ಅಂಕಿ- ಅಂಶ ಎಲ್ಲರಲ್ಲೂ ಗಾಬರಿ ಉಂಟುಮಾಡಿದೆ.

ಪ್ರಸ್ತುತ ನವೆಂಬರ್ ತಿಂಗಳನ್ನು ಹೊರತುಪಡಿಸಿ ಜನವರಿಯಿಂದ ಅಕ್ಟೋಬರ್ ವರೆಗೆ 232 ನಾಪತ್ತೆ ಪ್ರಕರಣ ದಾಖಲಾಗಿದೆ. ಇದು ಹತ್ತು ತಿಂಗಳ ಅಂಕಿ- ಅಂಶವಾದರೆ, ನವೆಂಬರ್ ಒಂದೇ ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನುತ್ತವೆ ಪೊಲೀಸ್ ಮೂಲಗಳು. ಈ ಹತ್ತು ತಿಂಗಳಲ್ಲಿ ದಾಖಲಾದ 232 ಪ್ರಕರಣಗಳ ಪೈಕಿ 194 ಮಂದಿ ಪತ್ತೆಯಾಗಿದ್ದಾರೆ. 38 ಮಂದಿಯದ್ದು ಇನ್ನೂ ಸುಳಿವಿಲ್ಲ‌. ಇನ್ನು ಈ ತಿಂಗಳಿನದ್ದೂ ಸೇರಿದರೆ 50ಕ್ಕೂ ಹೆಚ್ಚು ಮಂದಿ ಎಲ್ಲಿದ್ದಾರೆ, ಹೇಗೆ ನಾಪತ್ತೆಯಾಗಿದ್ದಾರೆ ಎಂಬ ಕಾರಣ ನಿಗೂಢವಾಗಿದೆ.

‘‘ಈ ಕುರಿತು ಚರ್ಚೆ ನಡೆಸಿದ್ದೇನೆ. ಇನ್ನೂ ಪತ್ತೆಯಾಗದ ಹಳೆಯ ಪ್ರಕರಣಗಳು ಸಾಕಷ್ಟಿವೆ ಎಂಬುದು ಗಮನಕ್ಕೆ ಬಂದಿದೆ. ಕೆಲವು ಪ್ರಕರಣಗಳಲ್ಲಿ ಮಹಿಳೆಯರು ಪರಿಚಿತರೊಂದಿಗೆ ನಾಪತ್ತೆಯಾಗಿರುವುದು ಇದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಯುವತಿಯರು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಅಪರಿಚಿತರೊಂದಿಗೆ ನಾಪತ್ತೆಯಾದ ಪ್ರಕರಣಗಳೂ ಇವೆ. ಹೆಚ್ಚು ವರ್ಷಗಳಿಂದ ಇನ್ನೂ ಪತ್ತೆಯಾಗದ ಪ್ರಕರಣಗಳಿಗೆ ಹೆಚ್ಚು ಮಹತ್ವ ನೀಡಿ, ಅವರನ್ನು ಪತ್ತೆ ಮಾಡುವ ಕಾರ್ಯ ಮಾಡಲಾಗುವುದು. ಜೊತೆಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗುವುದು’’ – ಡಾ.ಸುಮನ ಪೆನ್ನೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

× Chat with us