ಸಹೋದರರು, ಭಾವನ ಜತೆ ಸೇರಿ ಸ್ಕೆಚ್‌ ಹಾಕಿ ಪತಿಯನ್ನೇ ಹತೈಗೈದ ಪತ್ನಿ!

ಮೈಸೂರು: ಮನೆಯ ಬಳಿ ಬಂದ ಪತಿಯನ್ನು ಆತನ ಪತ್ನಿಯೇ ತನ್ನ ಸಹೋದರರು ಮತ್ತು ಭಾವನೊಂದಿಗೆ ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಭಾನುವಾರ ತಡರಾತ್ರಿ ಕೂರ್ಗಳ್ಳಿಯಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ತಾಲ್ಲೂಕಿನ ಇಬ್ಜಾಲ ಗ್ರಾಮದ ಕೆಂಪಶೆಟ್ಟಿ (35) ಎಂಬವರೇ ಕೊಲೆಯಾದವರು. ಇವರ ಪತ್ನಿ ಶಶಿಕಲಾ, ಕೆಂಡಶೆಟ್ಟಿ, ನಾಗೇಂದ್ರ (ಶಶಿ ಸಹೋದರರು), ರಮೇಶ್ (ಶಶಿ ಭಾವ) ಎಂಬವರೇ ಆರೋಪಿಗಳು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ತಲೆಮ ರೆಸಿಕೊಂಡಿರುವ ನಾಗೇಂದ್ರ ಎಂಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

12 ವರ್ಷಗಳ ಹಿಂದೆ ಎಚ್.ಡಿ.ಕೋಟೆ ತಾಲ್ಲೂಕಿನ ಹೊಳೆಹುಂಡಿ ಗ್ರಾಮದ ಶಶಿಕಲಾ ಅವರನ್ನು ಕೆಂಪಶೆಟ್ಟಿ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯಾದ ನಂತರ ತನ್ನ ಹೆಂಡತಿಯ ಊರಿನಲ್ಲಿಯೇ ಇದ್ದ ಈತ, 3 ವರ್ಷಗಳಿಂದ ತನ್ನ ಸಂಸಾರದೊಂದಿಗೆ ಮೈಸೂರಿನ ಕೂರ್ಗಳ್ಳಿಯಲ್ಲಿ ವಾಸವಿದ್ದು, ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಶಶಿಕಲಾ ಕೂಡ ಗಾರ್ಮೆಂಟ್ಸ್‌ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು.

ಹೀಗಿರುವಾಗ ಕೆಂಪಶೆಟ್ಟಿಗೆ ತನ್ನ ಪತ್ನಿ ಶಶಿಕಲಾ ನಡತೆ ಮೇಲೆ ಅನುಮಾನ ಬಂದಿದ್ದು, ಈ ವಿಚಾರದಲ್ಲಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ 2017 ಮೇ ತಿಂಗಳಿನಲ್ಲಿ ಶಶಿಕಲಾ ಹೊಳೆಹುಂಡಿಯ ತನ್ನ ತಾಯಿಯ ಮನೆಯಲ್ಲಿದ್ದಾಗ ಈತ ಮನೆಗೆ ಬೆಂಕಿ ಹಾಕಿಯೂ ಬಂದಿದ್ದ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಾದ ಮೇಲೂ ಗೋಪಾಲಪುರದಲ್ಲಿ ಮತ್ತೊಮ್ಮೆ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಮೂರು ತಿಂಗಳ ಜೈಲುವಾಸವನ್ನು ಅನುಭವಿಸಿ ಜಾಮೀನನ ಮೇಲೆ ಹೊರ ಬಂದಿದ್ದ. ನಂತರ ಹೆಂಡತಿಯಿಂದ ಪ್ರತ್ಯೇಕವಾಗಿದ್ದರೂ, ಆಗಾಗ ಮನೆಯ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶಶಿಕಲಾ, ಕೆಂಡಶೆಟ್ಟಿ, ನಾಗೇಂದ್ರ, ರಮೇಶ್ ಅವರು ಕೆಂಪಶೆಟ್ಟಿಯನ್ನು ಹತ್ಯೆ ಮಾಡಲು ಯೋಜನೆ ಹಾಕಿದ್ದರು.

ಕೆಂಪಶೆಟ್ಟಿಯೂ ಭಾನುವಾರ ರಾತ್ರಿ ಇಬ್ಜಾಲದಿಂದ ಬೈಕ್‌ನಲ್ಲಿ ಕೂರ್ಗಳ್ಳಿಯ ಶಶಿಕಲಾ ಮನೆಗೆ ಬಂದಿದ್ದು, ಅಲ್ಲಿಯೇ ತಡರಾತ್ರಿ ಈತನನ್ನು ನಾಲ್ವರು ಸೇರಿಕೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕೆಂಪಶೆಟ್ಟಿಯ ಎಡಪಕ್ಕೆಗೆ, ಎದೆ ಭಾಗಕ್ಕೆ, ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ. ಗಲಾಟೆ ಕೇಳಿ ಬಂದ ಸಾರ್ವಜನಿಕರು ಆಂಬ್ಯುಲೆನ್ಸ್ ಕರೆಸಿ, ಕೆಂಪಶೆಟ್ಟಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಡಿಸಿಪಿ ಪ್ರದೀಪ್ ಗುಂಟಿ, ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್, ವಿಜಯನಗರ ಇನ್‌ಸ್ಪೆಕ್ಟರ್ ಬಾಲಕೃಷ್ಣ ಮತ್ತು ಇತರೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us