ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆ ನಡ್ದೆ ನಡೆಯುತ್ತೆ: ಸಚಿವ ಸುರೇಶ್‌ಕುಮಾರ್

ಚಾಮರಾಜನಗರ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆ ನಡೆಯುತ್ತದೆ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

ಚಾಮರಾಜನಗರದ ಹನೂರಿನಲ್ಲಿ ಮಾತನಾಡಿದ ಅವರು, ಜೂ. 21ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿದೆ. ಪರೀಕ್ಷೆ ನಡೆಸಲು ಕಳೆದ ವರ್ಷದ ನೀಡಿದ್ದ ಎಸ್‌ಒಪಿಯನ್ನೇ ಅಳವಡಿಸಬೇಕು. ಏನಾದರು ಸುಧಾರಣೆ ಮಾಡಬೇಕೆ ಎಂದು ಆರೋಗ್ಯ ಇಲಾಖೆಯನ್ನು ಕೇಳಿದ್ದೇವೆ ಎಂದು ತಿಳಿಸಿದರು.

ಪರೀಕ್ಷೆ ನಡೆಸುವಂತೆ ಎಲ್ಲಾ ಕಡೆಯಿಂದ ಒತ್ತಾಯ ಬರುತ್ತಿದೆ. ಸಭಾಪತಿ ಬಸವರಾಜ ಹೊರಟ್ಟಿ ಸಹ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದಾರೆ. ಪರೀಕ್ಷೆ ಆರಂಭವಾಗುವ ದಿನಾಂಕ ಇನ್ನೂ ಎರಡು ತಿಂಗಳ ಮೇಲಿದೆ. ಆಗಿಂದಾಗ್ಗೆ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. 1 ರಿಂದ 9ನೇ ತರಗತಿಗಳಿಗೆ ಪರೀಕ್ಷೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ಗುರುವಾರ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಅಂತಿಮ ತೀರ್ಮಾನ ಪ್ರಕಟಿಸುತ್ತೇವೆ ಎಂದರು.

ಸಿಬಿಎಸ್‌ಇ ಪರೀಕ್ಷೆಯನ್ನು ದೆಹಲಿಯಂತೆ ನಮ್ಮ ರಾಜ್ಯದಲ್ಲೂ ಪರೀಕ್ಷೆ ರದ್ದು ಮಾಡಬೇಕೆ? ಪರೀಕ್ಷೆ ರದ್ದು ಮಾಡುವುದು ಸರಿಯೇ, ತಪ್ಪೇ ಎಂದು ವಿದ್ಯಾರ್ಥಿಗಳನ್ನು ಸುರೇಶ್‌ ಕುಮಾರ್‌ ಪ್ರಶ್ನಿಸಿದರು.

ಪರೀಕ್ಷೆ ರದ್ದು ಮಾಡುವುದರಿಂದ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪರೀಕ್ಷೆ ನಡೆಸದೆ ಹಾಗೇ ಪಾಸ್ ಮಾಡಿದರೆ, ಚೆನ್ನಾಗಿ ಓದುವವರಿಗೂ ಹಾಗೂ ಓದದೇ ಇರುವವರಿಗೂ ಒಂದೇ ಆಗುತ್ತದೆ. ಇದರಿಂದ ಒಳ್ಳೆ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದು ಮಾಡುವುದು ಬೇಡ. ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.

× Chat with us