ನಾವು ಗಾಂಧಿಯನ್ನೇ ಬಿಟ್ಟಿಲ್ಲ, ನೀವು ಯಾವ ಲೆಕ್ಕ: ಹಿಂದೂ ಮಹಾಸಭಾ ಮುಖಂಡನ ವಿವಾದಾತ್ಮಕ ಹೇಳಿಕೆ

ಮಂಗಳೂರು: ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನೀವು ಯಾವ ಲೆಕ್ಕ ನಮಗೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ʻಬಸವರಾಜ ಬೊಮ್ಮಾಯಿಯವರೆ, ಯಡಿಯೂರಪ್ಪನವರೆ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರೆ ನೆನಪಿಟ್ಟುಕೊಳ್ಳಿ ಬಹಳ ಕಠಿಣ ಆದೀತು ನಿಮಗೆʼ ಎಂದು ಜೀವ ಬೆದರಿಕೆ ಹಾಕಿದ್ದಾರೆ.

ಮೊಟ್ಟೆ ಕದ್ದಾಯಿತು, ಮೊಟ್ಟೆಯಲ್ಲಿ ದುಡ್ಡು ಮಾಡಿದವರು ಈಗ ದೇವಸ್ಥಾನಗಳಲ್ಲಿ ದುಡ್ಡು ಮಾಡಲು ಯಾಕೆ ಹೋಗುತ್ತಿದ್ದೀರಿ? ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಕಿಡಿಕಾರಿದ್ದಾರೆ.

ಕಳೆದ ಸಲ ಚಿತ್ರದುರ್ಗದಲ್ಲಿ ಬಿಜೆಪಿ ಸರ್ಕಾರದಿಂದ ದೇವಸ್ಥಾನದ ಮೇಲಿನ ದಾಳಿ ಖಂಡಿಸಿ ಹೋರಾಟ ಮಾಡಿದ್ದೆವು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಒಂದು ದೇವಸ್ಥಾನ ತೆರವುಗೊಳಿಸಲಾಯಿತು. ಈಗ ಮೈಸೂರಿನಲ್ಲಿ ಪುರಾತನ ದೇವಸ್ಥಾನ ತೆರವಾಗಿದೆ. ಇನ್ನೂ ಅನೇಕ ಧಾರ್ಮಿಕ ಕೇಂದ್ರಗಳ ಪಟ್ಟಿ ಇದೆ. ಆದರೆ, ಎಲ್ಲಾದರೂ ಇತಿಹಾಸದಲ್ಲಿ ಬೇರೆ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿದ್ದು ನೋಡಿದ್ದಾರಾ ಎಂದು ಧರ್ಮೇಂದ್ರ ಪ್ರಶ್ನಿಸಿದ್ದಾರೆ.

ಅಂದು ಯಾವುದೋ ಒಂದು ವಿಚಾರಕ್ಕೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜಿಲ್ಲೆಗೆ ಬೆಂಕಿ ಇಡುತ್ತೇವೆ, ಜಿಲ್ಲೆ ಹೊತ್ತಿ ಉರಿಯುತ್ತೆ ಎಂಬ ಹೇಳಿಕೆ ನೀಡಿದ್ದರು. ಇದರರ್ಥ ಏನು? ಇವತ್ತು ಕಾಂಗ್ರೆಸ್ ಆಡಳಿತದಲ್ಲಿ ಇದ್ದಿದ್ದರೆ ಮಾತ್ರ ಇವರು ಬೆಂಕಿ ಹಾಕುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

× Chat with us