ಚಾಮರಾಜನಗರ ಜಿಲ್ಲಾ ಉಸ್ತುವಾರಿ ನನಗೆ ಬೇಡವೆಂದು ಕೈ,ಮುಗಿದ ಸಚಿವ ವಿ.ಸೋಮಣ್ಣ

ಚಾಮರಾಜನಗರ: ವಸತಿ ಸಚಿವ ವಿ.ಸೋಮಣ್ಣ ಅವರನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಹೊತ್ತಿನಲ್ಲೇ ಈ ಜಿಲ್ಲೆಯ ಉಸ್ತುವಾರಿ ನನಗೆ ಬೇಡ ಎಂದು ಸಚಿವ ಸೋಮಣ್ಣ ಅವರು ಕೈಮುಗಿದ ಘಟನೆ ಬುಧವಾರ ನಡೆಯಿತು.

ಚಾಮರಾಜನಗರದ ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅವರ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ನಗರ ಪ್ರವಾಸಿಮಂದಿರಕ್ಕೆ ಬಂದ ವೇಳೆ ಮಾತನಾಡಿದ ಅವರು, ಚಾಮರಾಜನಗರ ಉಸ್ತುವಾರಿ ಸಚಿವರಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸದೇ ಕ್ಷಣಹೊತ್ತು ಮೌನಕ್ಕೆ ಶರಣಾದ ಸೋಮಣ್ಣ, ಉಸ್ತುವಾರಿ ಸಚಿವ ಸ್ಥಾನ ಬೇಡವೇ? ಎಂದು ಕೇಳಿದ್ದಕ್ಕೆ ವೇಳೆ ತಾನು ಒಲ್ಲೆ ಎಂದು ತಲೆಯಾಡಿಸಿ ಕೈ ಮುಗಿದರು‌.

ಇದಕ್ಕೂ ಮುನ್ನ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಒಲಿದಿರುವ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಇಡೀ ದೇಶದಲ್ಲೇ ಬಿಜೆಪಿ ಅಲೆಯಿದೆ. ಅದರಂತೆ ಮೈಸೂರಿನ ಪಾಲಿಕೆಯಲ್ಲೂ ಬಿಜೆಪಿ ಬಂದಿದೆ. ಮೇಯರ್ ಸ್ಥಾನ ಬಂದಿರುವುದು ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಶುಭಸೂಚಕ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗುಡಿಸಲು ಮುಕ್ತ ಕರ್ನಾಟಕದ ಗುರಿ ಹೊಂದಿದ್ದು, ರಾಜ್ಯದಲ್ಲಿ ಅರ್ಹ ಬಡವರಿಗೆ ವಸತಿ ನೀಡಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಫಲಾನುಭವಿಗಳಿಗೆ ವಸತಿ ಒದಗಿಸಲಾಗುವುದು ಎಂದು ಹೇಳಿದರು.

× Chat with us