ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ ಸಿದ್ದರಾಮಯ್ಯರ ಜೊತೆಯಾಗಿ ಹೋರಾಟ ಮಾಡುತ್ತೇನೆ: ಎಚ್‌.ಸಿ.ಮಹದೇವಪ್ಪ

ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಅಪಾಯ ಸಮಯ ಬಂದಾಗಲೆಲ್ಲಾ ಸಿದ್ದರಾಮಯ್ಯ ಅವರ ಜೊತೆಯಾಗಿ ನಾನು ಹೋರಾಟ ಮಾಡುತ್ತೇವೆ ಎಂದು ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಬುಧವಾರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮಾಜಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಹೋರಾಟ ಸೃಷ್ಟಿಯಾಗುತ್ತೆ. ಅಂತಹ ಚಳವಳಿಗಳನ್ನು ನಾವು ಬೆಂಬಲಿಸುತ್ತೇವೆ. ಆದರೆ, ಅಹಿಂದ ವೇದಿಕೆಯನ್ನು ನಾವೇ ಸೃಷ್ಟಿ ಮಾಡುವುದಿಲ್ಲ. ನಾನು ಮತ್ತು ಸಿದ್ದರಾಮಯ್ಯ 1989 ರಿಂದಲೂ ಆತ್ಮೀಯರು. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಕೇವಲ ಅಂತೆಕಂತೆ ಅಷ್ಟೇ. ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ ನಾವು ಹೋರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

‘ಇದೀಗ ದೇಶದಲ್ಲಿ ಸಂವಿಧಾನಾತ್ಮಕ ವಾತಾವರಣವೇ ಕೆಡುತ್ತಿದೆ. ಜನಪರವಾದ ದನಿಗಳೇ ರಾಜಕೀಯ ವಲಯದಲ್ಲಿ ಕ್ಷೀಣಿಸುತ್ತಿರುವುದರಿಂದ ನಾನು ಮತ್ತು ಸಿದ್ದರಾಮಯ್ಯ ಅವರು ಹೋರಾಟಗಳನ್ನು ಸಂಘಟಿಸುವ ಮತ್ತು ಸಾಮಾಜಿಕ ನ್ಯಾಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸಲು ನಿರ್ಧರಿಸಿದ್ದೇವೆ’ ಎಂದಿದ್ದಾರೆ.

× Chat with us