ಪಾಲಿಕೆ ಸದಸ್ಯರು ಸೂಚಿಸಿದವರೇ ವಾರ್ಡ್ ಸಮಿತಿ ಸದಸ್ಯರು!?

ಮೈಸೂರು: ನಗರಪಾಲಿಕೆ ಸದಸ್ಯರು ಸೂಚಿಸಿದವರನ್ನೇ ವಾರ್ಡ್ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವುದು ಸರಿಯಲ್ಲ ಎಂದು ಜಾಗೃತ ನಾಗರಿಕರ ವೇದಿಕೆಯ ಸಂಚಾಲಕಿ ಹಾಗೂ ಆಪ್‍ ಜಿಲ್ಲಾಧ್ಯಕ್ಷೆ ಮಾಳವಿಕಾ ಗುಬ್ಬಿವಾಣಿ ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿಂದು ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್‍ ಸಮಿತಿ ರಚಿಸುವಾಗ ಪಾರದರ್ಶಕತೆ ಇರಬೇಕು. ಆದರೆ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಅವರು ಪಾಲಿಕೆ ಸದಸ್ಯರನ್ನೆ, ಸಮಿತಿ ಸದಸ್ಯರ ನೇಮಕಕ್ಕೆ ಶಿಪಾರಸು ಪಟ್ಟಿ ನೀಡಿ ಎಂದು ಕೇಳಿರುವುದು ಎಷ್ಟು ಸರಿ? ಪಾಲಿಕೆ ಸದಸ್ಯರು ಶಿಫಾರಸು ಮಾಡಿದವರನ್ನು ವಾರ್ಡ್ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿದರೆ ಇಂತಹ ಸಮಿತಿಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೆ? ಎಂದು ಪ್ರಶ್ನಿಸಿದರು.

ವಾರ್ಡ್ ಸಮಿತಿ ರಚನೆಯು ಆಯುಕ್ತರ ಕರ್ತವ್ಯವಾಗಿದೆ. ಅಲ್ಲದೆ, ಇದರಲ್ಲಿ ಪಾಲಿಕೆ ಸದಸ್ಯರ ಪಾತ್ರವಿಲ್ಲ. ಆಡಳಿತದಲ್ಲಿ ಸದಸ್ಯರ ಹಸ್ತಕ್ಷೇಪ ಸಂವಿಧಾನದ 74ನೇ ತಿದ್ದುಪಡಿ ಆಶಯ ಹಾಗೂ ಉದ್ದೇಶದ ಮತ್ತು 1976ರ ಕೆಎಂಸಿ ಕಾಯ್ದೆಯನ್ನೂ ಉಲ್ಲಂಘಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಗಾಗಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಅನುಸರಿಸಿದ ಆಯ್ಕೆ ಪ್ರಕ್ರಿಯೆ ಹಾಗೂ ಮಾನದಂಡಗಳನ್ನು ಇಲ್ಲಿಯೂ ಅನುಷ್ಠಾನಗೊಳಿಸುವ ಮೂಲಕ ಸಮಿತಿ ರಚಿಸಬೇಕು. ಎಂಸಿಸಿ ವೆಬ್‌ಸೈಟ್ ಹಾಗೂ ಇತರೆ ಮಾಧ್ಯಮಗಳ ಮೂಲಕ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಸದಸ್ಯರ ಆಯ್ಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ವೆಂಕಟೇಶ್, ಶೋಭಾನ, ಜನಾರ್ಧನ್ ಚಂದ್ರಗಿರಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

× Chat with us