ತಾಲಿಬಾನಿಗಳು ಬಂದು ನನ್ನನ್ನು ಕೊಲ್ಲಲಿ ಎಂದು ಕಾಯುತ್ತಿದ್ದೇನೆ: ಅಫ್ಗಾನ್‌ ಮೊದಲ ಮಹಿಳಾ ಮೇಯರ್‌ ಮಾತಿದು…

ಕಾಬೂಲ್‌: ತಾಲಿಬಾನಿಗಳು ಬಂದು ನನ್ನನ್ನು ಕೊಲ್ಲಲಿ ಎಂದು ಕಾಯುತ್ತಿದ್ದೇನೆ ಎಂದು ಅಫ್ಗಾನಿಸ್ತಾನದ ಪ್ರಥಮ ಮಹಿಳಾ ಮೇಯರ್‌ ಜರೀಫಾ ಗಫಾರಿ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ತಾಲಿಬಾನಿಗಳು ಸಂಪೂರ್ಣವಾಗಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಈ ಕುರಿತು ಮಾತನಾಡಿದ ಅವರು, ಅವರ (ತಾಲಿಬಾನಿಗಳು) ಬರುವಿಕೆಗಾಗಿ ನಾನು ಕಾಯುತ್ತಿದ್ದೇನೆ. ನಾನು ಮತ್ತು ನನ್ನ ಕುಟುಂಬಕ್ಕೆ ಸಹಾಯ ಮಾಡಲು ಯಾರೂ ಇಲ್ಲ. ಕುಟುಂಬದವರು, ಪತಿಯೊಂದಿಗೆ ನಾನು ಮನೆಯಲ್ಲಿದ್ದೇನೆ. ನನ್ನಂಥ ಜನರನ್ನು ಕೊಲ್ಲಲು ಅವರು ಬರಲಿʼ ಎಂದು ಮಾತನಾಡಿದ್ದಾರೆ.

ಹಿರಿಯ ಮುತ್ಸದ್ಧಿ ಅಶ್ರಫ್‌ ಗನಿ ಅವರು ಪದತ್ಯಾಗ ಮಾಡಿ ಅಫ್ಗಾನಿಸ್ತಾನ ಬಿಟ್ಟು ಪಲಾಯನಗೈದಿದ್ದಾರೆ. ನಾನು ಎಲ್ಲಿಗೆ ಹೋಗಲಿ ಎಂದು 27 ವರ್ಷದ ಜರೀಫಾ ಪ್ರಶ್ನಿಸಿದ್ದಾರೆ.

ತಾಲಿಬಾನಿಗಳ ಆಕ್ರಮಣಕ್ಕೂ ಮುನ್ನ ಕೆಲ ವಾರಗಳ ಹಿಂದೆ ಅಂತಾರಾಷ್ಟ್ರೀಯ ದಿನಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ, ʻದೇಶಕ್ಕೆ ಉತ್ತಮ ಭವಿಷ್ಯವಿದೆʼ ಭರವಸೆ ವ್ಯಕ್ತಪಡಿಸಿದ್ದರು. ಆದರೆ, ಭಾನುವಾರ ತಾಲಿಬಾನಿಗಳು ಇಡೀ ದೇಶವನ್ನು ವಶಕ್ಕೆ ಪಡೆದಿರುವುದು ಆಕೆಯ ಭರವಸೆಯನ್ನು ಹುಸಿಗೊಳಿಸಿದೆ.

ಜರೀಫಾ ಗಫಾರಿ ಅವರು, ಮೈಡಾನ್‌ ವಾರ್ಡಕ್‌ ಪ್ರಾಂತ್ಯದಲ್ಲಿ 2018ರಲ್ಲಿ ಪ್ರಥಮ ಹಾಗೂ ಅತಿ ಕಿರಿಯ ಮೇಯರ್‌ ಆಗಿ ಆಯ್ಕೆಯಾಗಿದ್ದರು.

ಈ ಹಿಂದೆಯೂ ತಾಲಿಬಾನಿಗಳಿಂದ ಜರೀಫಾಗೆ ಕೊಲೆ ಬೆದರಿಕೆ ಇತ್ತು. ಆಕೆಯ ತಂದೆ ಜನರಲ್‌ ಅಬ್ದುಲ್‌ ವಾಸಿ ಗಫಾರಿ ಅವರನ್ನು ಕಳೆದ ವರ್ಷ ನ.15ರಂದು ಉಗ್ರರು ಹತ್ಯೆಗೈದಿದ್ದರು. ಈಚೆಗೆ 20 ದಿನಗಳ ಹಿಂದೆ ಜರೀಫಾ ಮೇಲೆ ಮೂರನೇ ಬಾರಿಗೆ ನಡೆದ ಕೊಲೆ ಯತ್ನವೂ ವಿಫಲವಾಗಿತ್ತು.

× Chat with us