ತೀರ್ಪಿನಿಂದ ವಿಶ್ವನಾಥ್ ಧೃತಿಗೆಡಬೇಕಿಲ್ಲ: ಸಚಿವ ಆರ್.ಅಶೋಕ್

ಚಾಮರಾಜನಗರ: ಹೈಕೋರ್ಟ್ ತೀರ್ಪಿನಿಂದ ಎಚ್.ವಿಶ್ವನಾಥ್ ಅವರು ಧೃತಿಗೇಡಬೇಕಾಗಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲದಲ್ಲಿ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್​ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಚಿವರಾದ ಎಸ್.ಟಿ. ಸೋಮಶೇಖರ್, ಗೋಪಾಲಯ್ಯ‌ ಅವರ ಜೊತೆಗೂಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಎಚ್.ವಿಶ್ವನಾಥ್ ಸಚಿವರಾಗಬೇಕೆನ್ನುವ ಬಯಕೆ ನಮಗೆಲ್ಲಾ ಇತ್ತು. ಹೈಕೋರ್ಟ್ ನೀಡಿರುವ ಆದೇಶ ಶಾಕ್ ನೀಡಿದೆ ಎಂದರು.

ತೀರ್ಪೀನ ಕುರಿತು ಸಿಎಂ ಹಾಗೂ ವರಿಷ್ಠರು ಅಪೀಲ್ ಹೋಗುವ ತೀರ್ಮಾನ ಕೈಗೊಳ್ಳುತ್ತಾರೆ. ಅವರು ಎದೆಗುಂದುವುದು ಬೇಡ. ಅವರನ್ನು ಈಗಾಗಲೇ ವಿಧಾನ ಪರಿಷತ್‌ಗೆ ನಾಮಕರಣ ಮಾಡಿರುವ ಸರ್ಕಾರ ಅವರೊಂದಿಗೆ ಇರುತ್ತದೆ ಎಂದು ಅಭಯ ನೀಡಿದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಎಚ್.ವಿಶ್ವನಾಥ್ ಜೊತೆ ಸರ್ಕಾರ ಮತ್ತು ಪಕ್ಷ ಇರಲಿದ್ದು, ಅಡ್ವೊಕೇಟ್ ಜನರಲ್ ಕೂಡ ಸಮರ್ಪಕವಾಗಿ ವಾದಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸುವೆ ಎಂದು ಹೇಳಿದರು.

ಸಚಿವ ಗೋಪಾಲಯ್ಯ ಮಾತನಾಡಿ, ಎಚ್.ವಿಶ್ವನಾಥ್ ಅವರೊಂದಿಗೆ ಇದ್ದು, ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.

× Chat with us