ನಿರಾಸೆಯೊಂದಿಗೆ ಟಿ20 ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ಟಿ20 ವಿಶ್ವಕಪ್​ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ದ ತಂಡವನ್ನು ಮುನ್ನಡೆಸುವ ಮೂಲಕ ಕೊಹ್ಲಿ ಕೊನೆಯ ಬಾರಿ ಟಿ20 ತಂಡದ ನಾಯಕನಾಗಿ ಕಾಣಿಸಿಕೊಂಡರು. ಇತ್ತ ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ, ಲೀಗ್ ಹಂತದಿಂದಲೇ ಹೊರಬೀಳುವ ಮೂಲಕ ನಿರಾಸೆ ಮೂಡಿಸಿತು. ಇದರೊಂದಿಗೆ ತಮ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಕೊಹ್ಲಿ ಅವರ ಕನಸು ಕೂಡ ಕಮರಿತು.

2017 ರಲ್ಲಿ ಟಿ20 ತಂಡದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ಇದುವರೆಗೆ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 30 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇನ್ನು 4 ಪಂದ್ಯಗಳಲ್ಲಿ ಫಲಿತಾಂಶ ಮೂಡಿಬರದಿದ್ದರೆ, 16 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು.

ಟಿ20 ಕ್ರಿಕೆಟ್​ನ ಯಶಸ್ವಿ ನಾಯಕರಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏಕೆಂದರೆ 72 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮಹೇಂದ್ರ ಸಿಂಗ್ ಧೋನಿ 41 ಜಯ ತಂದುಕೊಟ್ಟರೆ, 28 ಪಂದ್ಯಗಳಲ್ಲಿ ಪರಾಜಯಗೊಂಡಿದ್ದರು. ಇನ್ನು ಮೂರು ಪಂದ್ಯಗಳಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಇಲ್ಲಿ ಇಬ್ಬರು ನಾಯಕತ್ವದ ಗೆಲುವಿನ ಶೇಕಡಾವಾರು ಗಮನಿಸಿದರೆ, ಧೋನಿ 59.28% ಹೊಂದಿದ್ದರೆ, ಕೊಹ್ಲಿ 63.82% ಗೆಲುವು ತಂದುಕೊಟ್ಟಿದ್ದಾರೆ. ಅದಾಗ್ಯೂ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬುದು ವಿಶೇಷ.

ಇನ್ನು SENA ರಾಷ್ಟ್ರಗಳಲ್ಲಿ ದ್ವಿಪಕ್ಷೀಯ T20I ಸರಣಿಗಳನ್ನು ಗೆದ್ದ ಏಕೈಕ ಭಾರತೀಯ ನಾಯಕ ಎಂಬ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಇಂಗ್ಲೆಂಡ್ (2018), ದಕ್ಷಿಣ ಆಫ್ರಿಕಾ (2018), ನ್ಯೂಜಿಲೆಂಡ್ (2020) ಮತ್ತು ಆಸ್ಟ್ರೇಲಿಯಾ (2020) ವಿರುದ್ದ ಕೊಹ್ಲಿ ನಾಯಕತ್ವದಲ್ಲಿ ಮಾತ್ರ ಟೀಮ್ ಇಂಡಿಯಾ ಸರಣಿ ಗೆದ್ದಿತ್ತು.

ಹಾಗೆಯೇ ಟಿ20 ತಂಡ ನಾಯಕನಾಗಿ ವೇಗವಾಗಿ 1 ಸಾವಿರ ರನ್ ಪೂರೈಸಿದ ದಾಖಲೆ ಕೂಡ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 30 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಒಟ್ಟು 94 ಟಿ20 ಪಂದ್ಯಗಳನ್ನಾಡಿರುವ ಕೊಹ್ಲಿ 3227 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಟಿ20 ನಾಯಕತ್ವ ತ್ಯಜಿಸಿದ ವಿರಾಟ್‌ ಅಭಿಮಾನಿಗಳಿಗೆ ಬಹಳ ಬೇಸರವಗಿದೆ.

× Chat with us