ಹುಣಸೂರು: ರಸ್ತೆ ಬದಿಯಲ್ಲಿ ಕಟ್ಟಿದ್ದ ಎತ್ತುಗಳ ಮೇಲೆ ಖಾಸಗಿ ಶಾಲಾ ವಾಹನ ಹರಿದ ಪರಿಣಾಮ ಒಂದು ಎತ್ತು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಂದು ಎತ್ತಿನ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಹುಣಸೂರು ತಾಲ್ಲೂಕು ಸಣ್ಣೇನಹಳ್ಳಿ ಗ್ರಾಮದ ದ್ಯಾವಪ್ಪ ಎಂಬವರ ಜೋಡಿ ಎತ್ತುಗಳನ್ನು ಎಂದಿನಂತೆ ಮನೆಯ ಮುಂದೆ ರಸ್ತೆ ಬದಿಯಲ್ಲಿ ಕಟ್ಟಿ ಹಾಕಲಾಗಿತ್ತು. ಹುಣಸೂರು ನಗರದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ನ ಖಾಸಗಿ ಶಾಲಾ ವಾಹನ ಇದೇ ರಸ್ತೆಯಲ್ಲಿ ಪ್ರತಿ ದಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುಲು ಬರುತ್ತಿತ್ತು. ಈ ವೇಳೆ ಪಕ್ಷಿಯೊಂದು ಚಾಲಕನ ಬಳಿ ವಾಹನದ ಕಿಟಕಿಯೊಳಗೆ ನುಗ್ಗಿದಾಗ ಗಾಬರಿಗೊಂಡ ಚಾಲಕ ಆ ಪಕ್ಷಿಯನ್ನು ಹೊಡೆಯಲು ಪ್ರಯತ್ನಿಸಿದ್ದಾನೆ. ಆ ಸಮಯದಲ್ಲಿ ನಿಯಂತ್ರಣ ತಪ್ಪಿದ ವಾಹನ ಮತ್ತೊಂದು ಕಡೆಗೆ ಚಲಿಸಿ ಎತ್ತುಗಳ ಮೇಲೆ ಹರಿದಿದೆ. ಘಟನೆಯಲ್ಲಿ ಒಂದು ಎತ್ತು ಮೃತಪಟ್ಟರೆ, ಮತ್ತೊಂದಕ್ಕೆ ತೀವ್ರವಾದ ಗಾಯಗಳಾಗಿವೆ. ವಾಹನದಲ್ಲಿ ಕುಳಿತಿದ್ದ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.