160 ಕಿ.ಮೀ ವೇಗದ ಹೈಸ್ಪೀಡ್ ರೈಲಿನಿಂದ ಮೈಸೂರು- ಬೆಂಗಳೂರು ಈಗ ಇನ್ನಷ್ಟು ಹತ್ತಿರ
ಮೈಸೂರು: ಒಂದೆಡೆ ದಶಪಥ ರಸ್ತೆ. ಇನ್ನೊಂದೆಡೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು. ಮೈಸೂರು ಮತ್ತು ಬೆಂಗಳೂರು ಈಗ ಇನ್ನಷ್ಟು ಹತ್ತಿರವಾಗಿದೆ. ಎಲ್ಲವೂ ಸರಿ ಹೋದರೆ ಮುಂದೊಂದು ದಿನ ಅವಳಿ ನಗರಗಳ ನಡುವಣ ಸಂಚಾರಕ್ಕೆ ಕೇವಲ ಒಂದು ಗಂಟೆ ಸಾಕು. ಈ ಸಂಚಾರ ಕ್ರಾಂತಿ ಉಭಯ ನಗರಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಭಾವಿಸಲಾಗಿದೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ (Vande Bharat Express train) ರೈಲಿಗೆ ಪ್ರದಾನಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಹೈಸ್ಪೀಡ್ ರೈಲು ಎಂದರೆ ಜಪಾನ್‌ನಂತಹ ದೇಶಗಳನ್ನು ಉಲ್ಲೇಖಿಸಲಾಗುತ್ತಿತ್ತು. ವಿದೇಶ ಪ್ರಯಾಣಕ್ಕೆ ತೆರಳಿದವರು ಬುಲೆಟ್ ಟ್ರೈನ್ ಗಳಲ್ಲಿ ಸಂಚರಿಸಿ ಸಂಭ್ರಮಿಸುತ್ತಿದ್ದರು. ಈಗ ಅದು ನಮ್ಮ ನೆಲದಲ್ಲಿಯೇ ಸಾಕಾರಗೊಂಡಿದೆ. 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ರೈಲು ನವೆಂಬರ್ 11ರಿಂದ ಮೈಸೂರು – ಬೆಂಗಳೂರು–&ಚೆನ್ನೈ ಮಾರ್ಗದಲ್ಲಿ ಓಡಾಡಲಿದೆ. ತಕ್ಷಣಕ್ಕೆ ಈ ರೈಲು ಇಷ್ಟೊಂದು ವೇಗದಲ್ಲಿ ಸಂಚರಿಸಬಲ್ಲ ಹಳಿ ವ್ಯವಸ್ಥೆ ನಮ್ಮಲ್ಲಿಲ್ಲ. ಆದರೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಈ ವೇಗದಲ್ಲಿ ಸಂಚರಿಸಬಲ್ಲುದು ಎನ್ನುವುದೇ ನಮಗೆ ಹೆಮ್ಮೆಯ ವಿಷಯವಾಗಿದೆ.
ಸೋಮವಾರ ಮುಂಜಾನೆ ಚೆನ್ನೈನಿಂದ ಹೊರಟು ಮಧ್ಯಾಹ್ನಕ್ಕೆ ಮುನ್ನ ಮೈಸೂರು ನಿಲ್ದಾಣಕ್ಕೆ ಆಗಮಿಸಿರುವ ರೈಲು ಕರ್ನಾಟಕದ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ. ಪ್ರಾಯೋಗಿಕ ಸಂಚಾರದ ಭಾಗವಾಗಿ ಮುಂಜಾನೆ 5.50ಕ್ಕೆ ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಹೊರಟ ರೈಲು ಬೆಳಗ್ಗೆ 10.20 ಕ್ಕೆ ಬೆಂಗಳೂರಿಗೆ ಆಗಮಿಸಿದೆ. ಅಲ್ಲಿಂದ 10.30ಕ್ಕೆ ಹೊರಟು 12.10 ನಿಮಿಷಕ್ಕೆ ಮೈಸೂರು ನಿಲ್ದಾಣ ತಲುಪಿದೆ. ಎರಡು ನಗರಗಳ ನಡುವಿನ 504 ಕಿಲೋ ಮೀಟರ್ ದೂರವನ್ನು ಸುಮಾರು ಆರೂವರೆ ಗಂಟೆಗಳಲ್ಲಿ ಕ್ರಮಿಸಿರುವ ರೈಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಅವಧಿಯಲ್ಲಿ ತಲುಪಲಿದೆ.
ರಾಜ್ಯದ ಮೊದಲ, ದೇಶದ 5ನೇ ವಂದೇ ಭಾರತ್ ರೈಲು
2019ರಲ್ಲಿ ಮೊದಲ ಬಾರಿಗೆ ಪ್ರಯಾಣ ಆರಂಭಿಸಿದ ವಂದೇ ಭಾರತ್ ಪ್ರಸ್ತುತ ನಾಲ್ಕು ರೈಲುಗಳ ಸೇವೆಯನ್ನು ನೀಡುತ್ತಿದೆ. ಮೈಸೂರು ಮತ್ತು ಚೆನ್ನೈ ನಡುವೆ ಆರಂಭವಾಗುತ್ತಿರುವ ರೈಲು ಐದನೆಯದ್ದಾಗಿದೆ. ಈಗಾಗಲೇ ದೆಹಲಿ- ವಾರಾಣಸಿ, ದೆಹಲಿ- ಶ್ರೀಮಾತಾ ವೈಷ್ಣೋದೇವಿ, ಮುಂಬೈ- ಗಾಂಧಿನಗರ, ದೆಹಲಿ- ಹಿಮಾಚಲ ಪ್ರದೇಶದ ಉನಾ ನಡುವೆ ವಂದೇ ಭಾರತ್ ರೈಲುಗಳು ಚಲಿಸುತ್ತಿವೆ. ಮೈಸೂರು, ಚೆನ್ನೈ ನಡುವಿನ ಪ್ರಯಾಣ ದರ ಎಕಾನಮಿ ಕ್ಲಾಸ್ ಗೆ 921 ರೂ. ಎಕ್ಸಿಕ್ಯುಟಿವ್ ಕ್ಲಾಸ್ ಗೆ 1880 ರೂ. ಎಂದು ನಿಗದಿಪಡಿಸಲಾಗಿದೆ. ಮೈಸೂರು, ಬೆಂಗಳೂರು ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್ ಗೆ 368 ರೂ., ಎಕ್ಸಿಕ್ಯುಟಿವ್ ಕ್ಲಾಸ್ ಗೆ 768 ರೂ.ನಿಗದಿ ಮಾಡಲಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ವಿಶೇಷತೆಗಳೇನು?
ಚೆನ್ನೈನ ಪೆರಂಬೂರಿನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸಿದ್ಧಗೊಂಡಿರುವ ಈ ರೈಲಿನ ವಿಶೇಷಗಳು ಹತ್ತಾರು. ಸದ್ಯದ ಮಟ್ಟಿಗೆ ಇದು ದೇಶದ ಅತ್ಯಂತ ವೇಗದ ರೈಲು. ಗರಿಷ್ಠ 160 ಕಿ.ಮೀ. ವೇಗದಲ್ಲಿ ಓಡುವ ರೈಲು ಸೊನ್ನೆಯಿಂದ 100 ಕಿ.ಮೀ ಸ್ಪೀಡ್ ಗೆ ವೇಗ ಪಡೆದುಕೊಳ್ಳಲು ಕೇವಲ 52 ಸೆಕೆಂಡ್ ಸಾಕು. ವಿಶ್ವದ ಅತ್ಯಂತ ವೇಗದ ರೈಲುಗಳ ಪೈಕಿ ಒಂದಾದ ಜಪಾನಿನ ಬುಲೆಟ್ ರೈಲು ಈ ವೇಗವನ್ನು ತಲುಪಲು 54.6 ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ. ಇಡೀ ರೈಲನ್ನು ಏರೋಡೈನಾಮಿಕ್ಸ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಗಾಳಿಯ ತಡೆಯನ್ನು ಭೇದಿಸಿ ರೈಲು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ.
ವಿಮಾನದಲ್ಲಿರುವ ಮಾದರಿಯಲ್ಲಿ ಸೀಟುಗಳನ್ನು ನಿರ್ಮಿಸಲಾಗಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್ ಗಳನ್ನು ಹೊಂದಿದೆ. ಆನ್ ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿಟಿವಿ, ಬಯೋ ಶೌಚಾಲಯಗಳನ್ನು ಹೊಂದಿದೆ. 16 ಬೋಗಿಗಳನ್ನು ಹೊಂದಿದ್ದು, 384 ಮೀಟರ್ ಉದ್ದವಿದೆ.ರೈಲಿನ ವೇಗ ಅಧಿಕವಾಗಿರುವುದರಿಂದ ಪ್ರಯಾಣದ ಸಮಯ ಶೇಕಡಾ 25ರಿಂದ 45ರವರೆಗೆ ಕಡಿಮೆಯಾಗಲಿದೆ. ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಅವಳಿ ಇಂಜಿನ್ ಬೋಗಿ ಸೇರಿ 1,180 ಪ್ರಯಾಣಿಕರ ಸೀಟಿನ ಸಾಮರ್ಥ್ಯವನ್ನು ಹೊಂದಿದೆ.
ಮೂರು ವರ್ಷಗಳಲ್ಲಿ ಐದು ವಂದೇ ಭಾರತ್ ರೈಲು
ದೇಶದಲ್ಲಿರುವ ರೈಲು ಸೇವೆಯ ವೇಗವನ್ನು ವೃದ್ಧಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ವಂದೇ ಭಾರತ್ ರೈಲುಗಳ ಉತ್ಪಾದನೆಗೆ ಅನುಮತಿಯನ್ನು ನೀಡಿತ್ತು. 2019ರ ಫೆ.15ರಂದು ಮೊದಲ ರೈಲಿಗೆ ಚಾಲನೆ ನೀಡಲಾಯಿತು. ಈ ರೈಲು ಶೇ.85ರಷ್ಟು ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ಯೋಜನೆ ರೂಪಿಸಲಾಗಿದೆ. ಆಗ ವಿಶ್ವದ ಅತಿ ದೊಡ್ಡ ರೈಲ್ವೆ ಸಂಪರ್ಕ ಜಾಲ ಹೊಂದಿರುವ ಭಾರತದ ರೈಲ್ವೆಯ ಚಹರೆ ಬದಲಾಗಲಿದೆ.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…