ಉಪವಾಸದ ಹಬ್ಬದ ಸೊಬಗು

ಉಪವಾಸದ ಹಬ್ಬದ ಸೊಬಗು

ಮೈಸೂರು, ಮಂಡ್ಯ ಭಾಗದಲ್ಲಿ ಆಷಾಢ ಮಾಸದಲ್ಲಿ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳಲ್ಲಿ ಉಪವಾಸದ ಹಬ್ಬವೂ ಒಂದು. ಸಂಬಂಧಗಳನ್ನು ಬೆಸೆಯುವ ಧ್ಯೋತಕವಾಗಿಯೂ ಪರಂಪರೆ ಬೆಳೆದು ಬಂದಿದೆ.

***

  • ಅಕ್ಷತಾ ಪಾಂಡವಪುರ

ಆಷಾಢ ಮಾಸದಲ್ಲಿ ಬರುವ ಏಕಾದಶಿ ಹಬ್ಬಕ್ಕೆಪ್ರಥಮ ಏಕಾದಶಿಅಂತ ಕರೆಯುತ್ತಾರೆ ಎಂಬುದು ಇತ್ತೀಚೆಗಷ್ಟೆ ತಿಳಿಯಿತು. ಆಗ ಅಂದ್ರೆ ಬಾಲ್ಯದಲ್ಲಿ ಹಬ್ಬ ಒಂದು ಕ್ಷಣ ರಪ್ ಪ್ ಪ್ ಅಂತ ಬಂದು ಹೋಗೋದೇ ಇವಾಗಿನ celebration ಅನ್ನಿಸಿಬಿಟ್ಟಿದೆ.

ಇದು ನಮಗೆ ಹಬ್ಬ! ಸಂಭ್ರಮ! ಆಚರಣೆ! ಆಟ! ಒಡನಾಟ ಆಹಾ ಒಂದೋ ಎರಡೋಮೊದಲು ಇದಕ್ಕೆ ಉಪವಾಸದಬ್ಬ, ತಿಂಡಿಯಬ್ಬ, ಪಟದಬ್ಬ, ಯಡೆಯಬ್ಬಾ ಅಂತಾನೇ ಕರೆಯುತ್ತಾ ಇದ್ದದ್ದು

ಮೂಲತಃ ಪಾಂಡವಪುರ ಪಕ್ಕದ ಹಾರೋಹಳ್ಳಿ ಗ್ರಾಮದವಳಾದ ನಾನು ಏಳನೇ ತರಗತಿಯವರೆಗೆ ಬೆಳೆದದ್ದು ಹಾರೋಹಳ್ಳಿಯಲ್ಲಿಯೇಇದು ನಮಗೆ, ನಮ್ಮೂರಿನ ಜನರಿಗೆ ತುಂಬಾ ಜೋರು ಹಬ್ಬ. ಆದರೆ ಒಂದು ಬೇಸರದ ಸಂಗತಿ ಎಂದರೆ ಹಬ್ಬಕ್ಕೆ ಶಾಲೆಯಲ್ಲಿ ರಜ ಕೊಡ್ತಾ ಇರ್ಲಿಲ್ಲ. ಆದ್ರೂ ದೊಡ್ಡವರು ದಿನವಿಡೀ ಉಪವಾಸವಿದ್ದು ಸಂಜೆ ಯೆಡೆ ಇಡ್ತಾ ಇದ್ದರು. ಹೀಗಾಗಿ ಶಾಲೆ ಮುಗಿಸಿಯೇ ಸಂಜೆಯ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ತಾ ಇದ್ದಾ ಕಾರಣ ಅಂತ ಲಾಸ್ ಏನೂ ಆಗ್ತಾ ಇರ್ಲಿಲ್ಲ.

ಹೊಸ ದಂಪತಿಯ ಪಾಡು: ಆಷಾಢ ಮಾಸದ ಅಮವಾಸ್ಯೆಯಾದ ವಾರದ ಬಳಿಕ ಬರುವ ಏಕಾದಶಿ ಹಬ್ಬವು ಹೊಸ ವಧುವರರಿಗೆ ಬೇಸರದ ಹಬ್ಬವಂತೂ ಹೌದು. ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಯಾಗಿ ವಾಸಿಸುವ ಹಾಗಿಲ್ಲ ಎಂಬ ಕಟ್ಟುನಿಟ್ಟಿನ ಹಿರಿಯರ ಮಾತು ಇದಕ್ಕೆ ಕಾರಣ.

ಆಷಾಢ ಮಾಸ ಶುರುವಿಗೂ ಮೊದಲು ತವರು ಮನೆ ಸೇರುವ ಹೆಣ್ಣು ವಾಪಸ್ ಗಂಡನ ಮನೆಗೆ ಹೋಗೋದು ಶ್ರಾವಣ ಮಾಸಕ್ಕೆ. ಗಂಡ ಕೂಡ ತನ್ನ ಹೆಂಡತಿಯನ್ನು ನೋಡಲು ಬರುವ ಹಾಗಿಲ್ಲ. ಇಬ್ಬರು ಸೇರುವ ಹಾಗಿಲ್ಲ. ಆಮೇಲೆ ಆಮೇಲೆ ಹೋದಾಗ ಬಂದಾಗ ಮಾತನಾಡಿಸಿಕ್ಕೊಂಡು ಹೋಗಲು ಒಂಚೂರು permission  ಸಿಕ್ಕೀತು.

ಹೊಸ ಅಳಿಯ, ಉಡುಗೊರೆ ಏನಯ್ಯ?

ಆಷಾಢ ಮಾಸದ ಏಕಾದಶಿ ಹಬ್ಬಕ್ಕೆ ಹೊಸ ಅಳಿಯರಿಗಂತೂ ಭರ್ಜರಿ ಉಡುಗೊರೆ ಸಿಗುತ್ತಿತ್ತು. ತನ್ನ ಅಂತಸ್ತಿಗೆ ತಕ್ಕ ಹಾಗೆ ಉಡುಗೊರೆ ಕೊಡುತ್ತಿದ್ದರು ಹೆಣ್ಣುಕೊಟ್ಟ ಮಾವಂದಿರು. ಕೆಲವರು ಆಡಂಬರಕ್ಕೆ ಉಡುಗೊರೆ ಕೊಡುತ್ತಿದ್ದರು. ಒಟ್ನಲ್ಲಿ ಹಬ್ಬದಲ್ಲಿ ಕೊಟ್ಟ ಉಡುಗೊರೆಯ ಮೇಲೆ ಹೆಣ್ಣು ಮಕ್ಕಳ ಸಂಸಾರ ಸಾಗುತ್ತಾ ಇತ್ತು ಅಂದ್ರೆ ನಂಬಲೇಬೇಕು. ‘ಉಪವಾಸದ ಹಬ್ಬಕ್ಕೆ ನಿಮ್ಮಪ್ಪ ಏನ್ ಕೊಟ್ಟ? ಉಂಗುರ ಅಂತೂ ಕೊಡ್ಲಿಲ್ಲ, ಹೋಗ್ಲಿ ಒಂದು ವಾಚು!?’ ಅಂತ ದರ್ಪದಿಂದ ಮಾತಾಡಿರುವ ಉದಾಹರಣೆಗಳು ಸಾಕಷ್ಟಿವೆ.

ಸಾಮಾನ್ಯವಾಗಿ ಬೀಗರಿಗೆ ಉಪವಾಸದ ಯೆಡೆಗೆ ಅಂತ ಅಡುಗೆ ಸಾಮಾನುಗಳು, ಬಾಕ್ಸ್ ಗಳು, ವಿವಿಧ ಬಗೆಯ ತಿಂಡಿ ತಿನಿಸುಗಳು, ಒಂದಷ್ಟು ಬಟ್ಟೆಬರೆ, ಫ್ಯಾನು, ಬೀರು, ಬೆಳ್ಳಿ, ಚಿನ್ನ ಜೊತೆಗೆ ಗಾಳಿಪಟ ಕೂಡ ಕೊಡ್ತಿದ್ದ ಕಾಲ ಅದಾಗಿತ್ತು. ಹಬ್ಬಕ್ಕೆ ಮೂರು ದಿನ ಮುಂಚೆ ಹೆಣ್ಣಿನ ಮನೆಯವರು ಬಂದು ಈ ಯೆಡೆಗೆ ಸಾಮಾನುಗಳನ್ನು ಕೊಟ್ಟು ಹೋಗುತ್ತಿದ್ದರು. ಒಟ್ನಲ್ಲಿ ಗಂಡಸರಿಗೆಹೆಂಡತಿ ಬಿಟ್ಟು ಇರಬೇಕಲ್ಲಪ್ಪಅನ್ನೋ ಕೊರಗು ಒಂದುಕಡೆಯಾದರೆ, ‘ಒಂದಷ್ಟು ಉಡುಗೊರೆ ಸಿಗುತ್ತೆಅನ್ನೋ ಸಂತೋಷ ಮತ್ತೊಂದು ಕಡೆ ಇರ್ತಾ ಇತ್ತು.

 ಉಪವಾಸ ಹೇಗೆ?

ತಿಳಿಯದೆ ಮಾಡಿರುವ ತಪ್ಪುಗಳು ಪಾಪಕರ್ಮಗಳು ಕಳೆದು ಎಲ್ಲವೂ ಒಳ್ಳೆಯದೇ ಆಗಲಿ ಎಂಬ ಮನೋಭಾವದಿಂದ ದೇವರಲ್ಲಿಹಿರಿಯರಲ್ಲಿ ಪ್ರಾರ್ಥನೆ (ಸಂಕಲ್ಪ )ಮಾಡಿ ದಿನವಿಡೀ ಉಪವಾಸವಿದ್ದು ಸಂಜೆ ಸೂರ್ಯ ಮುಳುಗಿದ ಮೇಲೆ ಯಡೆ ಇಟ್ಟು ಪೂಜೆ ಪುನಸ್ಕಾರ ಮಾಡಿ ನಂತರ ಉಪವಾಸ ಬಿಡುತ್ತಿದ್ದರು. ಇನ್ನೂ ಕೆಲವರು ಮಾರನೆಯ ದಿನ ಬೆಳಿಗ್ಗೆ ಯಡೆ ಇಟ್ಟು ಉಪವಾಸ ಬಿಡುತ್ತಿದ್ದರು.

ವಿವಿಧ ಬಗ್ಗೆಯ ತಿಂಡಿಗಳು

ಉಪವಾಸ ಹಬ್ಬದ ಮತ್ತೊಂದು ವಿಶೇಷತೆಯೆಂದರೆ ವಿವಿಧ ಬಗೆಯ ತಿಂಡಿಗಳು. ೧೫ ದಿನದ ಹಿಂದೆಯೇ ತಿಂಡಿ ಮಾಡಲು ತಯ್ಯಾರಿ ನಡೆಯುತ್ತದೆ. ಅಕ್ಕಪಕ್ಕದವರಿಗೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ಬೀಗರಿಗೆ ಕೊಡಲು ಸಾಕಾಗುವಷ್ಟು ವಿಶಿಷ್ಟ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಲಾಗುತ್ತಿತ್ತು. ಬುಟ್ಟಿಗಟ್ಟಲೆ ತಿಂಡಿ ಮಾಡಿ ಅದನ್ನ ಅವರಿಗೆ ಇವರಿಗೆ ಎಂದು ವಿಂಗಡಿಸಿ ತಲುಪಿಸುವ ತನಕ ತಾಯಂದಿರ ಶ್ರಮ ಅಷ್ಟಿಷ್ಟಲ್ಲ!

ಚಕ್ಲಿ, ನಿಪ್ಪಟ್ಟು, ಕೋಡುಬಳೆ ಇವು ಖಾರ ತಿಂಡಿಗಳಾದ್ರೆ, ಚಿಕ್ಕಿನುಂಡೆ, ಕಜ್ಜಾಯ, ಕರ್ಜಿಕಾಯಿ, ಸಜ್ಜಾಪ ಸಿಹಿ ತಿನಿಸುಗಳು. ಅದಕ್ಕಾಗಿ ನಾವು ಪ್ರಥಮ ಏಕಾದಶಿ ಹಬ್ಬವನ್ನು ತಿಂಡಿ ಹಬ್ಬ ಅಂತ ಕರೆಯೋದು, ಕರೆಯುತ್ತಿದ್ದದ್ದು ಉಂಟು.

***

ಹಬ್ಬದ ಆಚರಣೆಗೆಂದೇ ಚೀಟಿ

ಹಬ್ಬದ ಆಚರಣೆಗೆಂದು ಚೀಟಿ ಹಾಕ್ತಾರೆ. ಹಬ್ಬದ ಸಮಯಕ್ಕೆ ಸರಿಯಾಗಿ ಎಣ್ಣೆತುಪ್ಪ ಒಂದಷ್ಟು ಕಾಳುಕಡ್ಡಿ ಅಂತ ತಿಂಡಿ ಮತ್ತು ಅಡುಗೆ ಮಾಡಲಿಕ್ಕೆ ಬೇಕಾದಂತಹ ಸಾಮಗ್ರಿಗಳನ್ನು ಕೊಡುತ್ತಾರೆ. ಇನ್ನು ಮಾರನೆಯ ದಿನ ವರ್ಷದುಡುಕಿಗೆ ಅಂತ ಮಟನ್(ಗುಡ್ಡೆ ಮಾಂಸ)ಕೂಡ ಕೊಡುತ್ತಿದ್ದರು. ಒಂಥರಾ ಜನರಿಗೆ ಅನುಕೂಲವೇ ಆಗ್ತಾ ಇತ್ತು. ಒಂದು ಸಲ ಮಾತ್ರ ನಮ್ಮ ಅಮ್ಮ ಕಟ್ಟಿದ್ದ ಚೀಟಿ ದುಡ್ಡನ್ನು ತೆಗೆದು ಕೊಂಡು ಓಡಿ ಹೋದ್ರು ನೋಡಿ ಮಾರನೇ ವರ್ಷದ ಚೀಟಿ ಕಟ್ಟಲೆ ಇಲ್ಲ. ಆದ್ರೂ ಒಂದು ವರ್ಷ ಬಿಟ್ಟು ಎಂದಿನಂತೆ ಹಬ್ಬದ ಚೀಟಿ ಕಟ್ಟೋದ್ದನ್ನ ಶುರು ಮಾಡಿದ್ರು.. ಕೇಳಿದ್ರೆ, ‘ಯಾರೋ ಒಬ್ಬರು ಓಡಿ ಹೋದ್ರೆ ಎಲ್ಲರೂ ಹಂಗೇನಾಅನ್ನೋ ಮಾತು.

***

 

ಅಕ್ಷತಾ ಪಾಂಡವಪುರ

× Chat with us