ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ವೃದ್ಧ, ಯುವಕನನ್ನು ರಕ್ಷಿಸಿದ ಮೈಸೂರಿನ ಹೈದ

ಹಾಸನ: ಕೊಣನೂರಿನ ಕಾವೇರಿ ನದಿಯಲ್ಲಿ ನೀರು ಪಾಲಾಗುತ್ತಿದ್ದ ವೃದ್ಧ ಮತ್ತು ಯುವಕನನ್ನು ಗಿರಿಮಂಜು ಎಂಬವರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.

ಭಾನುವಾರ ಸಂಜೆ 6 ಗಂಟೆಯಲ್ಲಿ ಚಿಕ್ಕ ಅರಕಲಗೂಡಿನ ದಾಸೇಗೌಡರು (94) ಕೊಣನೂರಿನ ಕಾವೇರಿ ನದಿಗೆ ಬಿದ್ದು ಜಲಸಮಾಧಿಯಾಗುತ್ತಿದ್ದರು. ಇದನ್ನು ನೋಡಿದ ಹಾಸನದ ನವೀನ್ (23) ಎಂಬ ಯುವಕ ವೃದ್ಧನನ್ನು ರಕ್ಷಿಸಲು ಹೊಳೆಗೆ ಹಾರಿದರು. ಆದರೆ ಅವರು ಸಹ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಇದನ್ನು ಕಂಡು ನದಿ ಬಳಿ ಇದ್ದ ಜನರು ಜೋರಾಗಿ ಕೂಗಲು ಆರಂಭಿಸಿದರು.

ಇದೇ ವೇಳೆ ಮೈಸೂರಿನ ಗಿರಿಮಂಜು ಎಂಬುದು ತೂಗುಸೇತುವೆ ವೀಕ್ಷಿಸುತ್ತಾ ಛಾಯಾಗ್ರಹಣ ಮಾಡುತ್ತಿದ್ದರು. ದಾಸೇಗೌಡರು ಮತ್ತು ನವೀನ್ ನೀರುಪಾಲಾಗುತ್ತಿದ್ದ ಸಂಗತಿ ತಿಳಿದು ಪ್ರಾಣದ ಹಂಗು ತೊರೆದು ರಭಸವಾಗಿ ಹರಿಯುತ್ತಿದ್ದ ನೀರಿಗೆ ಧುಮುಕಿ ಇವರಿಬ್ಬರನ್ನು ರಕ್ಷಿಸಿದರು. ಕೊಣನೂರು ಠಾಣೆ ಪೊಲೀಸರು ಈ ಘಟನೆ ಬಗ್ಗೆ ವಿಚಾರಣೆ ನಡೆಸಿದರು.

ಜೀವದ ಹಂಗು ತೊರೆದು ಸಮಯ ಪ್ರಜ್ಞೆಯಿಂದ ಇಬ್ಬರ ಪ್ರಾಣ ರಕ್ಷಿಸಿದ ಗಿರಿಮಂಜು ಅವರ ಸಾಹಸಕ್ಕೆ ಪ್ರಶಂಸೆಗಳು ವ್ಯಕ್ತವಾಗಿವೆ.

× Chat with us