ಬಂಡೀಪುರ ಸಿಎಫ್ಒ ವಿರುದ್ಧ ಆದಿವಾಸಿಗಳ ಆಕ್ರೋಶ: ಉಮೇಶ್ ಕತ್ತಿ ಜತೆ ವಾಗ್ವಾದ

ಚಾಮರಾಜನಗರ: ಬಂಡೀಪುರ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಗೂಲಿ ನೌಕರರಾಗಿದ್ದ 208 ಮಂದಿ ಆದಿವಾಸಿಗಳನ್ನು ಏಕಾಏಕಿ 50-60 ಕಿ.ಮೀ ದೂರದ ಪ್ರದೇಶಗಳಿಗೆ ಸಿಎಫ್ಒ ವರ್ಗಾವಣೆ ಮಾಡಿದ್ದಾರೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಆದಿವಾಸಿ ಮಹಿಳೆಯರು ಅರಣ್ಯ ಸಚಿವ ಉಮೇಶ್ ಕತ್ತಿ ಎದುರು ಆಕ್ರೋಶ ಹೊರಹಾಕಿದರು.

ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯ ಆದಿವಾಸಿ ಕಾಲೋನಿಗೆ ಗುರುವಾರ ಭೇಟಿ ನೀಡಿದ್ದ ವೇಳೆ ಸಿಎಫ್‌ಒ ಎಸ್.ಆರ್.ನಟೇಶ್ ಅವರನ್ನು ಸುತ್ತುವರೆದ ಮಹಿಳೆಯರು ತರಾಟೆಗೆ ತೆಗೆದುಕೊಂಡರು.

ಗಿರಿಜನ ಕಾಲೊನಿಯ ವಯಸ್ಸಾದ ದಿನಗೂಲಿ ನೌಕರರನ್ನು ದೂರದ ಪ್ರದೇಶಕ್ಕೆ ಸಿಎಫ್ಒ ನಟೇಶ್ ಅವರು ವರ್ಗಾವಣೆ ಮಾಡಿದ್ದಾರೆ. ದೂರದ ಪ್ರದೇಶಕ್ಕೆ ವರ್ಗ ಮಾಡಿದ್ದರಿಂದ ಆ ಕಾಡಿನ ಮಾಹಿತಿ ಇರುವುದಿಲ್ಲ. ಇದರಿಂದ ಕಾಡು ಪ್ರಾಣಿಗಳ ದಾಳಿ ಸಂದರ್ಭದಲ್ಲಿ ಅವುಗಳಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೇ 24 ಗಂಟೆಗಳ ಕೆಲಸಕ್ಕೆ ತಿಂಗಳಿಗೆ ನೀಡಲಾಗುವ 11ಸಾವಿರ ರೂ ಸಂಬಳವೂ ಯಾವುದಕ್ಕೂ ಸಾಲುತ್ತಿಲ್ಲ. ಇದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ವೃದ್ದರು, ಮಕ್ಕಳನ್ನು ಕಟ್ಟಿಕೊಂಡು ಕುಟುಂಬಗಳನ್ನು ಸ್ಥಳಾಂತರಿಸಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿದ್ದೇವೆ ಎಂದು ಗ್ರಾಪಂ ಸದಸ್ಯ ಚಿಕ್ಕತಾಯಮ್ಮ ಹಾಗೂ ವೃದ್ಧೆ ಬೊಮ್ಮಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮಿಂದಲೇ ಕಾಡು ಉಳಿದಿದೆ ಎಂಬುದನ್ನು ಮರೆಯಬೇಡಿ. ಆದರೆ ನಮಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಕುರಿತು ಮಹಿಳೆಯರನ್ನು ಸಮಾಧಾನ ಪಡಿಸಲು ಯತ್ನಿಸಿದ ಸಚಿವ ಕತ್ತಿ,ಮಧ್ಯಾಹ್ನ ಅಧಿಕಾರಿಗಳ ಜೊತೆ ಸಭೆ ಕರೆದಿದ್ದು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದರಿಂದ ತೃಪ್ತರಾಗದ ಮಹಿಳೆಯರು ಸಚಿವರ ಜತೆ ವಾಗ್ದಾದಕ್ಕಿಳಿದರು. ಇದರಿಂದ ಸಿಟ್ಟಿಗೆದ್ದ ಸಚಿವ ಕತ್ತಿ, ಏನು ಮಾಡಿಕೊಳ್ಳುತ್ತಿರೊ ಮಾಡಿಕೊಳ್ಳಿ ಎಂದು ಹೇಳಿ ಕಾರು ಏರಿದರು.

ಇದಕ್ಕೂ ಮುನ್ನ ಕಾಲೊನಿಯಲ್ಲಿನ ಸಮಸ್ಯೆಗಳ ಕುರಿತು ಆದಿವಾಸಿ ಮಹಿಳೆಯರಿಂದ ಅಹವಾಲು ಆಲಿಸಿದರು. ಈ ವೇಳೆ ಶಾಸಕ ಸಿ.ಎಸ್.ನಿರಂಜನಕುಮಾರ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಕಾ.ರಾಮೇಶ್ವರಪ್ಪ ಹಾಜರಿದ್ದರು.

× Chat with us