ನಾಳೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ; ದಸರಾ ಹಿನ್ನೆಲೆ ಟಫ್‌ರೂಲ್ಸ್‌ ಜಾರಿ!

ಮೈಸೂರು: ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಧಿದೇವತೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಭಂಧಿಸಲಾಗಿದೆ.

ನಾಳೆ ಬೆಳಿಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿ ಇತರ ಗಣ್ಯರು ಉಪಸ್ಥಿತರಿರಲಿದ್ದಾರೆ,

ಈ ಹಿನ್ನೆಲೆಯಲ್ಲಿ ನಾಳೆ ಭಕ್ತರು, ಪ್ರವಾಸಿಗರಿಗೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ತಾವರೆಕಟ್ಟೆ ಗೇಟ್ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಚಾಮುಂಡಿಬೆಟ್ಟದ ನಿವಾಸಿಗಳು, ಉದ್ಘಾಟನಾ ಕಾರ್ಯಕ್ರಮದ ತಯಾರಿ ಕೆಲಸದ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುತ್ತಿದೆ. ಕೆ.ಆರ್ ಠಾಣಾ ಪೊಲೀಸರು ಸಾರ್ವಜನಿಕರ ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಹಲವೆಡೆ ರಸ್ತೆ ಏಕಮುಖ ಸಂಚಾರ:
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಬಂತೆಂದರೆ ಸಹಜವಾಗಿ ಮೈಸೂರು ನಗರದ ಹೃದಯ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ. ೯ ದಿನಗಳ ಕಾಲ ನಡೆಯುವ ದಸರಾ ವೇಳೆ ಮೈಸೂರು ನಗರದವರು ಮಾತ್ರವಲ್ಲ, ನೆರೆ ಜಿಲ್ಲೆ, ನೆರೆ ರಾಜ್ಯಗಳಿಂದ ಪ್ರವಾಸಿಗರ ದಂಡೇ ಮೈಸೂರು ನಗರದತ್ತ ಆಗಮಿಸಲಿದೆ.

ಸಹಜವಾಗಿ ನಗರದಲ್ಲಿ ವಾಹನ ದಟ್ಟಣೆ ನಿರೀಕ್ಷೆ ಮೀರಿ ಹೆಚ್ಚಾಗಲಿದ್ದು, ಈ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರು, ಯಾವ ರಸ್ತೆಯಲ್ಲಿ ಹೇಗೆ ಹೋಗಬೇಕು. ಯಾವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಎಲ್ಲಿ ವಾಹನ ನಿಲುಗಡೆ ಮಾಡಬೇಕು ಎಂಬುದರ ಬಗ್ಗೆ ಅರಿವಿಲ್ಲದೇ ಸಾರ್ವಜನಿಕರು ಸೇರಿದಂತೆ ಪ್ರವಾಸಿಗರು ಗೊಂದಲದಲ್ಲಿ ಸಿಲುಕುವ ಸಾಧ್ಯತೆ ಇದೆ. ಪ್ರವಾಸಿಗರ ಗೊಂದಲವನ್ನು ತಪ್ಪಿಸಲು ಯಾವ ರಸ್ತೆಯಲ್ಲಿ ತೆರಳಬೇಕು, ಎಲ್ಲಿ ವಾಹನ ನಿಲುಗಡೆ ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನ ನಗರ ಪೊಲೀಸರು ಹತ್ತಾರು ಸಲಹೆ,ಪರ್ಯಾಯ ಮಾರ್ಗ ತೋರಿಸಿದ್ದಾರೆ.

× Chat with us