20 ಸೀಟ್‌ ಭರ್ತಿಯಾದರೆ ಮಾತ್ರ ಮೈಸೂರಿನಿಂದ ತಿರುಪತಿಗೆ!

ಮೈಸೂರು: ಕೊರೊನಾ ಸೋಂಕಿನ ಭೀತಿಯಿಂದ ಸ್ಥಗಿತಗೊಂಡಿದ್ದ ಮೈಸೂರು- ತಿರುಪತಿ ಪ್ಯಾಕೇಜ್ ಟೂರ್ ಪುನರಾರಂಭಗೊಂಡಿದ್ದು, ಮಂಗಳವಾರ ಮೊದಲ ಪ್ರಯಾಣ ಆರಂಭವಾಗಿದೆ.

Temple

36 ಸೀಟುಗಳ ಸೌಲಭ್ಯವುಳ್ಳ ಬಸ್‌ನಲ್ಲಿ ಮೊದಲ ಪ್ರಯಾಣ ಆರಂಭವಾಗಿದ್ದು, ಮೊದಲ ದಿನವೇ 33 ಮಂದಿ ಪ್ರಯಾಣ ಆರಂಭಿಸಿದ್ದಾರೆ. ಫೆ.16 ಮತ್ತು 17 ಹಾಗೂ ಫೆ.25 ಮತ್ತು 26ಕ್ಕೆ ಮುಂದಿನ ಪ್ರಯಾಣವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಕನಿಷ್ಠ 20 ಮಂದಿ ನೋಂದಣಿ ಮಾಡಿಕೊಂಡು ಬೇಡಿಕೆಯಿಟ್ಟಲ್ಲಿ ದಿನವೂ ಪ್ಯಾಕೇಜ್‌ ಟೂರ್‌‌ ಲಭ್ಯವಾಗಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಮೈಸೂರು ಘಟಕದ ವ್ಯವಸ್ಥಾಪಕ ಚೇತನ್‌ ಮಾಹಿತಿ ನೀಡಿದ್ದಾರೆ.

ಮೈಸೂರಿನಿಂದ ತಿರುಪತಿಗೆ ೨ ದಿನಗಳ ಪ್ರವಾಸಕ್ಕೆ ೨,೫೮೨ ರೂ. ಹಾಗೂ ೩ ದಿನಗಳ ಪ್ರವಾಸಕ್ಕೆ ೩,೯೬೦ ರೂ. ದರ ನಿಗದಿ ಮಾಡಲಾಗಿದೆ. ೨ ದಿನಗಳ ಪ್ಯಾಕೇಜ್‌ನಲ್ಲಿ ತಿರುಪತಿ, ಮಂಗಾಪುರ ಹಾಗೂ ೩ ದಿನಗಳ ಪ್ಯಾಕೇಜ್‌ನಲ್ಲಿ ತಿರುಪತಿ, ಮಂಗಾಪುರ, ಕಾಳಹಸ್ತಿ ಮತ್ತು ಸ್ಥಳೀಯ ದೇವಾಲಯಗಳ ದರ್ಶನ ಪಡೆಯಬಹುದಾಗಿದೆ. ಉಪಹಾರ, ಮಧ್ಯಾಹ್ನದ ಊಟ ಹೊರತುಪಡಿಸಿ, ದರ್ಶನಕ್ಕೆ ಟಿಕೆಟ್ ಹಾಗೂ ತಂಗಲು ಕೊಠಡಿಗಳ ವ್ಯವಸ್ಥೆ ಎಲ್ಲವನ್ನೂ ಅಭಿವೃದ್ಧಿ ನಿಗಮವೇ ನೋಡಿಕೊಳ್ಳಲಿದೆ. ಸದ್ಯ 1 ಬಸ್‌ ಮಾತ್ರವೇ ಬಿಡಲಾಗಿದ್ದು, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ ಎಂದು ಚೇತನ್‌ ಮಾಹಿತಿ ನೀಡಿದ್ದಾರೆ.

ಮಾಹಿತಿಗೆ 0821-2423652, 8970650070 ಸಂಪರ್ಕಿಸಬಹುದು.

× Chat with us