ಮೂರು ಮೃಗಾಲಯಗಳು ಶೀಘ್ರವೇ ಪ್ರವಾಸಿಗರಿಗೆ ಮುಕ್ತ

ಮೈಸೂರು: ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿರುವುದರಿಂದ ಸದ್ಯವೇ ಹಂಪಿ, ಗದಗ ಹಾಗೂ ಬೆಳಗಾವಿಯ ಮೃಗಾಲಯಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿವೆ. ಪರಿಸ್ಥಿತಿ ಗಮನಿಸಿ ಮೈಸೂರು ಮೃಗಾಲಯವೂ ಪ್ರವಾಸಿಗರಿಗೆ ಮುಕ್ತವಾಗಲಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿದೆ. ಆದ್ದರಿಂದ ಹಂಪಿ, ಗದಗ ಹಾಗೂ ಬೆಳಗಾವಿಯ ಮೃಗಾಲಯಗಳಲ್ಲಿ ಮೊದಲ ಹಂತದಲ್ಲಿ ಜನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಮೈಸೂರು, ಬೆಂಗಳೂರು ಮೃಗಾಲಯಗಳನ್ನೂ ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವ ಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರನೇ ಅಲೆ ಆರಂಭವಾಗುತ್ತದೆ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಮೃಗಾಲಯಗಳಲ್ಲಿ ಮಕ್ಕಳಿಗಾಗಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. ಮೃಗಾಲಯಗಳ ಮುಂದೆಯೇ ಕೊರೊನಾ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅಪಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಚಿತ್ರನಟ ದರ್ಶನ್ ಅವರು ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯಲು ಕರೆ ಕೊಟ್ಟ ಬಳಿಕ ಚಿತ್ರನಟಿ ಅಮೂಲ್ಯ ಸೇರಿದಂತೆ ಸಾಕಷ್ಟು ಮಂದಿ ದೇಣಿಗೆ ನೀಡಲು, ದತ್ತು ಪಡೆಯಲು ಮುಂದೆ ಬಂದರು. ಜೂ.5ರಿಂದ ಈವರೆಗೂ ಆ್ಯಪ್ ಮೂಲಕ ಸುಮಾರು 2 ಕೋಟಿ ರೂ., ನೇರ ದತ್ತು ಸ್ವೀಕಾರ ಮತ್ತು ಆ್ಯಪ್ ಸೇರಿ 3.12 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ. ಕಳೆದ ಬಾರಿ ಲಾಕ್‌ಡೌನ್‌ನಲ್ಲಿ ಮೃಗಾಲಯ ಸಂಕಷ್ಟದಲ್ಲಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ನೇತೃತ್ವದಲ್ಲಿ ಸುಮಾರು 3 ಕೋಟಿ ರೂ. ದೇಣಿಗೆ ಸಂಗ್ರಹವಾಗಿತ್ತು. ಇದಕ್ಕಾಗಿ ಇಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ರಾಜ್ಯದ ೯ ಮೃಗಾಲಯಗಳಿಗೆ 2018-19ನೇ ಸಾಲಿನಲ್ಲಿ 62.35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 58.84 ಕೋಟಿ ರೂ. ಸಂಗ್ರಹವಾಗಿತ್ತು. 2019-20ನೇ ಸಾಲಿನಲ್ಲಿ 58.93 ಲಕ್ಷ ಮಂದಿ ಭೇಟಿ ನೀಡಿದ್ದು, 66.49 ಕೋಟಿ ರೂ. ಸಂಗ್ರಹವಾಗಿತ್ತು. ಆದರೆ 2020-21ನೇ ಸಾಲಿನಲ್ಲಿ ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರ ಸಂಖ್ಯೆ 18.88 ಲಕ್ಷಕ್ಕೆ ಕುಸಿದ ಪರಿಣಾಮವಾಗಿ ಆದಾಯ 24.26 ಕೋಟಿ ರೂ.ಗೆ ಇಳಿಕೆಯಾಯಿತು ಎಂದು ವಿವರಿಸಿದರು. ಮೃಗಾಲಯ ಪ್ರಾಧಿಕಾರದ ಸದಸ್ಯ ರಾದ ಜ್ಯೋತಿ ರೇಚಣ್ಣ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಾಣಿಗಳಿಗೆ ಸೋಂಕು ತಗುಲದಂತೆ ಮುಂಜಾಗ್ರತೆ

ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗುಲದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳನ್ನು ನೋಡಿಕೊಳ್ಳುವವರಿಗೆ ಆಗಾಗ ಸ್ಕ್ರೀನಿಂಗ್ ಮಾಡಲಾಗುತ್ತದೆ. ಅವರು ವೆಟ್ ಮ್ಯಾಟ್ ಅನ್ನು ದಾಟಿ ಪ್ರಾಣಿಗಳ ಬಳಿ ತೆರಳಬೇಕು. ಜತೆಗೆ ಮೃಗಾಲಯಗಳನ್ನು ದಿನಕ್ಕೆ ಮೂರು ಬಾರಿ ಸ್ಯಾನಿಟೈಸ್ ಮಾಡುತ್ತೇವೆ ಎಂದು ಮಹದೇವಸ್ವಾಮಿ ತಿಳಿಸಿದರು.

× Chat with us