ಜನತಾ ದಳಕ್ಕೆ ಯಾವುದೇ ಸಿದ್ಧಾಂತ ಇಲ್ಲ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ-ಎಚ್.ಡಿ.ದೇವೇಗೌಡರ ಭೇಟಿಗೆ ಟೀಕೆ

ಬೆಂಗಳೂರು: ಜಾ.ದಳಕ್ಕೆ ಯಾವುದೇ ಸಿದ್ದಾಂತ, ಕಾರ್ಯಕ್ರಮ ಇಲ್ಲ. ಅವರದ್ದು ಅನುಕೂಲ ಸಿಂಧು ರಾಜಕೀಯ. ಆದರೆ ಕಾಂಗ್ರೆಸ್ ಸಿದ್ದಾಂತಕ್ಕೆ ಬದ್ಧವಾಗಿರುವ ಪಕ್ಷ. ಬಿಜೆಪಿ ಜೊತೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋದ ಪಕ್ಷದ ನಾಯಕ ಸಿದ್ದರಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರು. ಅದಕ್ಕೆ ಜಾ.ದಳವನ್ನು ಬಿಜೆಪಿಯ ‘ಬಿ’ ಟೀಂ ಎಂದು ಕರೆಯುವುದು. ಆದರೆ ಅವರಿಗೆ ಹಾಗೆ ಕರೆದರೆ ಕೋಪ ಬರುತ್ತದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ಮಾಡಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡರು ಗೋಹತ್ಯೆ ನಿಷೇಧ ಕಾಯ್ದೆ ವಿರೋಧ ಮಾಡಿದರಾ ಎಂದು ಪ್ರಶ್ನಿಸಿ, ಈಗ ಹೋಗಿ ನರೇಂದ್ರ ಮೋದಿ ಜೊತೆಗೆ ಭಾಯಿ ಭಾಯಿ ಎನ್ನುತ್ತಿದ್ದಾರೆ ಎಂದು ಛೇಡಿಸಿದರು.

ಕಾಂಗ್ರೆಸ್ ಎಲ್ಲರಿಗೂ ನ್ಯಾಯಕೊಡಿಸುವ ಪಕ್ಷ. ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುವ ಪಕ್ಷ. ಬಿಜೆಪಿಯಲ್ಲಿ ಅಲ್ಪಸಂಖ್ಯಾತರು ಇರಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ಧ ಅವರು ಕೆಂಡ ಕಾರುತ್ತಿರುತ್ತಾರೆ. ಕೈಸ್ತರ ಚರ್ಚ್‌ಗಳಿಗೆ ನುಗ್ಗಿ ಗಲಾಟೆ ಮಾಡುತ್ತಿರುತ್ತಾರೆ ಎಂದು ದೂರಿದರು. ಯಾವುದೇ ಧರ್ಮವನ್ನು ಪಾಲನೆ ಮಾಡುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ. ಆದರೆ ಅದಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರಲ್ಲದೆ, ಬಿಜೆಪಿ ತಳ ಸಮುದಾಯ, ಬಡವರು, ರೈತರು, ಹಿಂದುಳಿದವರ ಪರವಾಗಿ ಇಲ್ಲ ಎಂದರು.

ಇಂದಿರಾ ಕ್ಯಾಂಟೀನ್, ಶೂ ಭಾಗ್ಯ, ಶಾದಿ ಭಾಗ್ಯ, ವಿದ್ಯಾ ಸಿರಿ ಎಲ್ಲವೂ ನಿಲ್ಲಿಸಿದ್ದಾರೆ. ಗೌತಮ್ ಅದಾನಿ ಏಷ್ಯಾದಲ್ಲಿಯೇ ನಂಬರ್ ಒನ್ ಶ್ರೀಮಂತ ಆಗಿದ್ದಾರೆ. ಇಂತವರು ಬೆಳೆಯಲು ಅವಕಾಶ ಹಾಗೂ ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಎಂದು ಹರಿಹಾಯ್ದಿದ್ದಾರೆ.

× Chat with us