ರಂಗನತಿಟ್ಟು ಪಕ್ಷಿಧಾಮದ ಭೂಮಿ ಖಾಸಗಿಯವರ ಪಾಲು?

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಂಗನತಿಟ್ಟು ಪಕ್ಷಿಧಾಮದ ವ್ಯಾಪ್ತಿಗೆ ಸೇರಿರುವ 15 ಎಕರೆ ಭೂಮಿಯನ್ನು ತಾಲ್ಲೂಕು ಆಡಳಿತವು ಖಾಸಗಿಯವರಿಗೆ ಮಂಜೂರು ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.

ಕಾವೇರಿ ನದಿ ಮಧ್ಯಭಾಗದಲ್ಲಿರುವ ದೇವರಾಜ ಪಕ್ಷಿಧಾಮದ ಎರಡು ನಡುಗಡ್ಡೆ ( ಐಲ್ಯಾಂಡ್ಸ್) ಗಳನ್ನು ಮೈಸೂರಿನ ಹೋಟೆಲ್ ಉದ್ಯಮಿಯೊಬ್ಬರಿಗೆ ಶ್ರೀರಂಗಪಟ್ಟಣ ತಾಲ್ಲೂಕು ತಹಸಿಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರೂ ಸೇರಿ ಮಂಜೂರು ಮಾಡಿರುವುದಲ್ಲದೇ, ದುರಸ್ತಿ ಮಾಡಿ ಹೊಸ ಸರ್ವೇ ನಂಬರ್ ಕೊಟ್ಟು, ಭೂ ಪರಿವರ್ತನೆಯನ್ನು ಮಾಡಿ, ಉದ್ಯಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೋಟೆಲ್ ಉದ್ಯಮಿಗೆ ನೀಡಿರುವ ಜಾಗವು ಶ್ರೀರಂಗಪಟ್ಟಣ ತಾಲ್ಲೂಕು ಹೊಂಗಳ್ಳಿ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 109 ಮತ್ತು 110 ರಲ್ಲಿ ಬರುತ್ತದೆ. ಇದು ಎಡಮುರಿಗೆ ಹೊಂದಿಕೊಂಡಂತಿದ್ದು, ಕನ್ನಂಬಾಡಿಕಟ್ಟೆಯ ಪೂರ್ವ ಭಾಗಕ್ಕೆ ಕೇವಲ 6 ಫರ್ಲಾಂಗ್ ದೂರದಲ್ಲಿ ಇದೆ. ಪ್ರಸ್ತುತ ಈ ಜಾಗವನ್ನು ದುರಸ್ತಿ ಮಾಡಿ ಹೊಸ ಸರ್ವೆ ನಂಬರ್ 337 ಮತ್ತು 338 ಕ್ಕೆ ಬದಲಾವಣೆ ಮಾಡಿಕೊಡಲಾಗಿದೆ.

ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು 1940 ನೇ ಇಸ್ವಿಯಲ್ಲಿ ಈ ಜಾಗವನ್ನು ಸೇರಿಸಿ ರಂಗನತಿಟ್ಟು ಪಕ್ಷಿಧಾಮ ಎಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದರು. ಅಲ್ಲದೆ ದಿನಾಂಕ 25-08-1990 ರಲ್ಲಿ ಅಂದಿನ ಸರ್ಕಾರ ವನ್ಯಜೀವಿ ವಲಯವಾಗಿ ಘೋಷಣೆ ಮಾಡಿತ್ತು. ಆದರೆ ಮೈಸೂರಿನ ಪ್ರಸಿದ್ಧ ಹೋಟೆಲ್ ಉದ್ಯಮಿಯೊಬ್ಬರು ತಮ್ಮ ಹಣದ ಪ್ರಭಾವ ಬೀರಿ ಈ ಜಾಗವನ್ನು ತಮ್ಮ ಹೆಸರಿಗೆ ಮಂಜೂರು, ಭೂಪರಿವರ್ತನೆ ಮಾಡಿಸಿಕೊಂಡು ಹೊಸ ಸರ್ವೇ ನಂಬರ್‌ಗೆ ದುರಸ್ತಿ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣ ಹೈಕೋರ್ಟ್‌ನಲ್ಲೂ ದಾಖಲಾಗಿದೆ. ಮೈಸೂರು ವಿಭಾಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ದಿನಾಂಕ 22 -10 -2019 ರಂದು ಮಂಡ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಯನ್ನೇ ಖಾಸಗಿಯವರಿಗೆ ಮಂಜೂರು ಮಾಡಿಕೊಟ್ಟಿರುವವರು ಇನ್ನೂ ಮಹಾರಾಜರು ಕಟ್ಟಿಸಿರುವ ಕನ್ನಂಬಾಡಿಕಟ್ಟೆಯನ್ನು ಮಾರಾಟ ಮಾಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ಈ ಕೆಲಸದಲ್ಲಿ ಭಾಗಿಯಾಗಿರುವ ಶ್ರೀರಂಗಪಟ್ಟಣ ತಹಸಿಲ್ದಾರ್ ಮತ್ತು ಅಧೀನ ಸಿಬ್ಬಂದಿ ಹಾಗೂ ಸರ್ವೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವರದಿ ಅಧರಿಸಿ ಕ್ರಮ

ʻರಂಗನತಿಟ್ಟು ಪಕ್ಷಿಧಾಮದ 15 ಎಕರೆ ವಿಸ್ತೀರ್ಣದ ಎರಡು ನಡುಗಡ್ಡೆಗಳನ್ನು ಮೈಸೂರಿನ ಹೋಟೆಲ್ ಉದ್ಯಮಿಯೊಬ್ಬರಿಗೆ ಖಾತೆ ಮಾಡಿಕೊಟ್ಟಿರುವ ಸಂಬಂಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಮತ್ತು ಜಾಗವನ್ನು ಪಡೆದುಕೊಂಡಿರುವವರ ಕಡೆಯ ವಕೀಲರು ವಾದ ಮಾಡುತ್ತಿದ್ದಾರೆ. ಅಲ್ಲದೆ ಈ ವಿಚಾರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ವರದಿಗಳನ್ನು ಆಧರಿಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದುʼ.
– ಡಾ.ಎಂ.ವಿ. ವೆಂಕಟೇಶ್, ಜಿಲ್ಲಾಧಿಕಾರಿ, ಮಂಡ್ಯ

—–

ಮೋಹನ್‌ಕುಮಾರ ಬಿ.ಟಿ

× Chat with us