BREAKING NEWS

ನಾಮಾವಶೇಷಕ್ಕೆ ದಿನ ಎಣಿಸುತ್ತಿರುವ ಲ್ಯಾನ್ಸ್‌ಡೌನ್ ಕಟ್ಟಡ

ಈ ಕಟ್ಟಡ ಮುಂಬೈನ ವಿಕ್ಟೋರಿಯಾ ಟರ್ಮಿನಲ್ ಮಾದರಿಯ ವಾಸ್ತುಶಿಲ್ಪವನ್ನು ಹೋಲುತ್ತದೆ.

ಗಿರೀಶ್ ಹುಣಸೂರು

ಮೈಸೂರು: ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಸದುದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಹತ್ತನೇ ಚಾಮರಾಜ ಒಡೆಯರ್ ಅವರು ಕಟ್ಟಿಸಿದ್ದ ಲ್ಯಾನ್ಸ್‌ಡೌನ್ ಕಟ್ಟಡ ನಿರ್ವಹಣೆ ಕೊರತೆಯಿಂದ ದಶಕಗಳ ಹಿಂದೆ ಕುಸಿದು ಬಿದ್ದು ಅಸ್ತಿಪಂಜರದಂತೆ ನಿಂತಿದ್ದು, ಈಗ ನಾಮಾವಶೇಷಕ್ಕೆ ದಿನಗಳನ್ನು ಎಣಿಸುತ್ತಿದೆ.

ಮುಂಬೈನ ವಿಕ್ಟೋರಿಯಾ ಟರ್ಮಿನಲ್ ಮಾದರಿಯ ವಾಸ್ತುಶಿಲ್ಪವನ್ನು ಹೋಲುವ ಲ್ಯಾನ್ಸ್‌ಡೌನ್ ಕಟ್ಟಡ ಅಂದಿನ ಕಾಲಕ್ಕೆ ಜಗನ್ಮೋಹನ ಅರಮನೆ ಸಂಪರ್ಕಿಸುವ ರಸ್ತೆಯಿಂದ ಶುರುವಾಗಿ ದೇವರಾಜ ಅರಸು ರಸ್ತೆಯಾಚೆಗೂ ಕಟ್ಟಡ ಹರಡಿಕೊಂಡಿತ್ತು.

ಅನೇಕ ಪತ್ರಿಕಾ ಕಚೇರಿಗಳು, ಹಳೇ ಪತ್ರಿಕೆಗಳನ್ನು ಕೊಳ್ಳುವ-ಮಾರುವ ಅಂಗಡಿಗಳು, ನ್ಯೂಸ್ ಪೇಪರ್ ಹೌಸ್, ಸ್ಟೇಷನರಿ ವಸ್ತುಗಳ ಅಂಗಡಿಗಳು, ಚಿನ್ನ-ಬೆಳ್ಳಿ ಅಂಗಡಿಗಳು, ಪ್ರಿಂಟಿಂಗ್ ಪ್ರೆಸ್‌ಗಳು, ಟೈಪಿಂಗ್ ಇನ್‌ಸ್ಟಿಟ್ಯೂಟ್‌ಗಳ ಜತೆಗೆ ಖಾದಿ ಭಂಡಾರ ಕೂಡ ಇಲ್ಲಿತ್ತು. 1927ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿ ಅವರು ಲ್ಯಾನ್ಸ್‌ಡೌನ್ ಕಟ್ಟಡದಲ್ಲಿನ ಖಾದಿ ಭಂಡಾರಕ್ಕೂ ಭೇಟಿ ನೀಡಿದ್ದರು. ಮೈಸೂರಿನ ಮೊದಲ ಜೆರಾಕ್ಸ್ ಅಂಗಡಿಯೂ ಇಲ್ಲಿಯೇ ಪ್ರಾರಂಭವಾಗಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

 

ಇಷ್ಟು ದೊಡ್ಡ ಕಟ್ಟಡಕ್ಕೆ ಅಂದಿನ ಕಾಲಕ್ಕೆ ಕಬ್ಬಿಣ, ಸಿಮೆಂಟ್ ಬಳಸಲಾಗಿಲ್ಲ. ಸುಟ್ಟ ಇಟ್ಟಿಗೆ, ಸುಣ್ಣದ ಗಾರೆ, ಕಲ್ಲು ಬಳಸಿ ಈ ಕಟ್ಟಡವನ್ನು ನಿರ್ಮಿಸಿ, ಮದ್ರಾಸ್ ಆರ್‌ಸಿಸಿಯನ್ನು ಹಾಕಲಾಗಿದೆ. ತೆರೆದ ಕಾರಿಡಾರ್‌ನಲ್ಲಿನ ಕಮಾನು ದ್ವಾರಗಳು ಇಡೀ ಕಟ್ಟಡದ ಅಂದವನ್ನು ಹೆಚ್ಚಿಸಿತ್ತು. ಇಲ್ಲಿನ ಒಂದು ಮಳಿಗೆಯಿಂದ ಇನ್ನೊಂದು ಮಳಿಗೆಯ ಮಧ್ಯದ ಗೋಡೆಗಳನ್ನು ಕೆಲವೆಡೆ ಬೊಂಬು-ಮಣ್ಣು ಬಳಸಿ ತಡಿಕೆ ಗೋಡೆಗಳಾಗಿ ನಿರ್ಮಿಸಲಾಗಿದೆ.

2011ರಲ್ಲೇ ಸಮಿತಿ ಎಚ್ಚರಿಸಿತ್ತು: ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ರಚಿಸಲಾಗಿದ್ದ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿಯ ಸದಸ್ಯರಾದ ಮೇಜರ್ ಜನರಲ್ ಸುಧೀರ್ ಒಂಭತ್ಕೆರೆ, ಈಚನೂರು ಕುಮಾರ್, ಎನ್.ಆರ್.ಅಶೋಕ್, ಪ್ರೊ.ಎನ್.ಎಸ್.ರಂಗರಾಜು, ನಾಗೇಶ್, ನಾಗರಾಜ ರಾವ್, ರವಿ ಗುಂಡೂರಾವ್, ಪ್ರಾಚ್ಯವಸ್ತು ಇಲಾಖೆ ಉಪನಿರ್ದೇಶಕರಾಗಿದ್ದ ಗಾಯತ್ರಿ ಮೊದಲಾದವರು ಕಟ್ಟಡದ ಪರಿಶೀಲನೆ ನಡೆಸಿ, ಜಗನ್ಮೋಹನ ಅರಮನೆ ಕಡೆಗೆ ಕಟ್ಟಡದ ಮೇಲ್ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಎರಡು ನೀರಿನ ಟ್ಯಾಂಕ್‌ಗಳಿಂದ ನೀರು ಸೋರಿಕೆಯಾಗಿ ಗೋಡೆ ಶಿಥಿಲವಾಗಿರುವುದನ್ನು ಪತ್ತೆ ಹಚ್ಚಿದ್ದರು. ಕಟ್ಟಡದ ಸುರಕ್ಷತೆ ದೃಷ್ಟಿಯಿಂದ ಅನಧಿಕೃತ ಟ್ಯಾಂಕ್‌ಗಳನ್ನು ತೆರವುಗೊಳಿಸಿ ಶಿಥಿಲ ಗೋಡೆಯನ್ನು ದುರಸ್ತಿಪಡಿಸುವುದಕ್ಕಾಗಿ ಪ್ರಾಚ್ಯವಸ್ತು ಇಲಾಖೆ, ಮೈಸೂರು ಮಹಾ ನಗರಪಾಲಿಕೆಗೆ 25 ಸಾವಿರ ರೂ. ನೀಡಿತ್ತು. ಆದರೆ, ಆ ಹಣ ಎಲ್ಲಿ ಹೋಯಿತೋ ಗೊತ್ತಿಲ್ಲ. 2012ರಲ್ಲಿ ಶಿಥಿಲಗೊಂಡಿದ್ದ ಆ ಭಾಗ ಕುಸಿದು ಬಿದ್ದು ಜೀವಗಳು ಬಲಿಯಾಗಬೇಕಾಯ್ತು. ಆದರೂ, ಅನಧಿಕೃತವಾಗಿ ಟ್ಯಾಂಕ್ ನಿರ್ಮಿಸಿದ್ದವರ ವಿರುದ್ಧ ಕ್ರಮಕ್ಕೆ ಮುಂದಾಗದ ಮಹಾ ನಗರಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರ ಪರಿಣಾಮ ಇಡೀ ಕಟ್ಟಡ ಇಂದು ಅಸ್ತಿಪಂಜರದಂತೆ ನಿಂತಿದೆ ಎಂದು ಬೊಟ್ಟು ಮಾಡುತ್ತಾರೆ ಪಾರಂಪರಿಕ ಸಮಿತಿಯಲ್ಲಿರುವ ತಜ್ಞರು.

ಸಂರಕ್ಷಣೆಗೆ ಬಿಡಲೇ ಇಲ್ಲ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡದ ಸಂರಕ್ಷಣೆಗಾಗಿ 6 ಕೋಟಿ ರೂ. ಅನುದಾನ ನೀಡಿದ್ದರು. ಮುಂಬೈನ ಮೆ. ಸಾವನಿ ಕನ್‌ಸ್ಟ್ರಕ್ಷನ್ ಕಂಪೆನಿಗೆ ಸಂರಕ್ಷಣೆಯ ಕೆಲಸವನ್ನು ವಹಿಸಲಾಗಿತ್ತು. ಸಂರಕ್ಷಣೆಯ ಕೆಲಸ ಆರಂಭಿಸಿದ್ದ ಸಾವನಿ ಕನ್‌ಸ್ಟ್ರಕ್ಷನ್ ಕಂಪೆನಿಯವರು ಶೇ.40 ರಷ್ಟು ಕೆಲಸ ಮುಗಿಸಿದ್ದರು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆ ಕಂಪೆನಿಗೆ ಕೆಲಸ ಮಾಡಲು ಬಿಡದ ಕಾರಣ, ಅರ್ಧಕ್ಕೆ ಕೆಲಸ ನಿಂತಿತು. ಆ ನಂತರದಲ್ಲಿ ಕಟ್ಟಡದ ಸಂರಕ್ಷಣೆಗಾಗಿ ಅಳವಡಿಸಿದ್ದ ಕಿಟಿಕಿ-ಬಾಗಿಲುಗಳನ್ನೂ ಕಳ್ಳರು ಹೊತ್ತೊಯ್ದಿದ್ದಾರೆ.

 

ಮೈಸೂರು ನಗರದಲ್ಲಿ ಪಾರಂಪರಿಕ ಕಟ್ಟಡಗಳನ್ನು ನೆಲಸಮಗೊಳಿಸುವ ಮಾಫಿಯಾ ಕೆಲಸ ಮಾಡುತ್ತಿದೆ. ಈ ಮಾಫಿಯಾ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಅಡ್ಡ ಬರುತ್ತಿದೆ. ರಾಜರ ಕಾಲದ ಕಟ್ಟಡಗಳನ್ನು ನೆಲಸಮಗೊಳಿಸಿ, ಕಾಂಕ್ರೀಟ್ ಕಟ್ಟಡ ಕಟ್ಟೋಣ ಎಂಬುದೇ ಆ ಮಾಫಿಯಾದ ವಾದವಾಗಿದೆ.

-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

 

andolana

Recent Posts

ಮನಮೋಹನ್ ಸಿಂಗ್‌ ನಿಧನ | 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಕೇಂದ್ರ

ಹೊಸದಿಲ್ಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್(‌92) ಅವರು ಗುರುವಾರ ವಿಧಿವಶರಾಗಿದ್ದಾರೆ. ಅವರ ಗೌರವಾರ್ಥ ಕೇಂದ್ರ ಸರ್ಕಾರ ದೇಶಾದ್ಯಂತ 7 ದಿನಗಳ…

37 seconds ago

ಹದಗೆಟ್ಟ ಭಾಗಮಂಡಲ-ಕರಿಕೆ ಮಾರ್ಗ

ಪುನೀತ್ ಮಡಿಕೇರಿ: ರಾಜ್ಯದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಭಾಗ ಮಂಡಲ-ಕರಿಕೆ ಮಾರ್ಗ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ…

24 mins ago

ಕಾಡಂಚಿನ ಗ್ರಾಮಗಳ ಜನರ ರಕ್ಷಣೆಗೆ ಬದ್ಧ

ಆಂದೋಲನ ವಿಶೇಷ ಸಂದರ್ಶನದಲ್ಲಿ ಹುಲಿ ಯೋಜನೆಯ ನಿರ್ದೇಶಕರೂ ಆದ ಪಿ.ಎ ಸೀಮಾ ಬದ್ಧತೆಯ ನುಡಿ ಮೈಸೂರು: ದೇಶದಲ್ಲೇ ಅತಿ ಹೆಚ್ಚು…

2 hours ago

ಓದುಗರ ಪತ್ರ | ಕನ್ನಡದ ಭವನ ಕಟ್ಟಿ

ಮಂಡ್ಯ ಸಾಹಿತ್ಯ ಸಮ್ಮೇಳನ ಮುಗಿಯುತ್ತಿದ್ದಂತೆ ಪರಿಷತ್ತಿನಲ್ಲಿ ಭಿನ್ನಮತ ಸ್ಫೋಟ! ? ಹೊಸ ಅಧ್ಯಕ್ಷರು ನೇಮಕವಾಗುತ್ತಿದ್ದಂತೆ ಮಾಡಬೇಕೆನ್ನುತ್ತಿದ್ದಾರೆ ಪರಿಷತ್ ಭವನವನ್ನು ಮಾರಾಟ!?…

3 hours ago

ಓದುಗರ ಪತ್ರ | ಸಿದ್ದರಾಮಯ್ಯನವರ ಹೆಸರಿಡುವುದು ಸೂಕ್ತ

ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಲಕ್ಷಿ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಮೇಟಗಳ್ಳಿ ರಾಯಲ್ ಇನ್ ಜಂಕ್ಷನ್‌ವರೆಗಿನ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಬೇಕು…

3 hours ago

ಓದುಗರ ಪತ್ರ | ಮಾಧ್ಯಮಗಳ ನಡೆ ಪ್ರಶಂಸನೀಯ

ಶಸ್ತ್ರಚಿಕಿತ್ಸೆಗೆಂದು ಅಮೆರಿಕದ ಫ್ಲೋರಿಡಾ ಆಸ್ಪತ್ರೆಗೆ ತೆರಳಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಡಾ. ಶಿವರಾಜ್‌ಕುಮಾರ್‌ರವರು ಶಸಚಿಕಿತ್ಸೆಯ ನಂತರ ಆರೋಗ್ಯವಾಗಿದ್ದಾರೆ ಎಂದು…

3 hours ago