ಭೀಕರವಾಗಿ ಯುವತಿಯ ಹತ್ಯೆ

ಕೆ.ಆರ್.ಪೇಟೆ: ಯುವತಿಯ ರುಂಡ-ಮುಂಡ, ಕೈ ಕಾಲುಗಳನ್ನು ಕತ್ತರಿಸಿ ಭಯಾನಕವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಬಿಸಾಡಿದ್ದು, ತಾಲ್ಲೂಕಿನ ಹೇಮಗಿರಿ ಬಳಿಯ ತ್ರಿಶೂಲ್ ಜಲವಿದ್ಯುದಾಗಾರದ ಮುಖ್ಯ ಗೇಟಿನಲ್ಲಿ ಪತ್ತೆಯಾಗಿದೆ.

೨೫ ರಿಂದ ೩೦ ವರ್ಷದ ಅಪರಿಚಿತ ಯುವತಿಯನ್ನು ಬರ್ಬರವಾಗಿ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು ಗೋಣಿಚೀಲದಲ್ಲಿ ಕಾರಿನಲ್ಲಿಟ್ಟುಕೊಂಡು ಬಂದು ಇಲ್ಲಿ ಬಿಸಾಡಿ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಲೆ ಹಾಗೂ ದೇಹದ ಭಾಗವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿದ್ದು, ಯುವತಿಯ ಮೂಗಿನಲ್ಲಿ ಕೆಂಪು ಹರಳಿನ ಮೂಗುತಿ, ಬಲಗೈನ ಮುಂಗೈನ ಮೇಲೆ ಮೀನಿನ ಹಚ್ಚೆಯ ಗುರುತು ಇದೆ. ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸರನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡರ ಒಡೆತನದ ತಾಲ್ಲೂಕಿನ ಹೇಮಗಿರಿಯ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತ್ರಿಶೂಲ್ ಜಲ ವಿದ್ಯುದಾಗಾರದಲ್ಲಿ ಮಹಿಳೆಯ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ನವೀನ್‌ಕುಮಾರ್, ವೃತ್ತ ನಿರೀಕ್ಷಕ ಕೆ.ಎನ್.ಸುಧಾಕರ್, ಗ್ರಾಮಾಂತರ ಪೋಲಿಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಸುರೇಶ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

× Chat with us