ಹನೂರು: ಸೇತುವೆಯ ಮೇಲೆ ನೀರು ಹರಿದ ಪರಿಣಾಮ : ಗ್ರಾಮಸ್ಥರು ಸಂಚರಿಸಲು ತೊಂದರೆ ಉಂಟಾಗಿದೆ

ಹನೂರು: ತಾಲೂಕಿನ ಅಜ್ಜೀಪುರದ ಬಳಿಯ ಉಡುತೊರೆ ಜಲಾಶಯದಿಂದ ಶನಿವಾರ ಹೆಚ್ಚಿನ ನೀರು ಬಿಟ್ಟ ಹಿನ್ನಲೆ ನಾಗಣ್ಣ ನಗರದ ಹೊರವಲಯದಲ್ಲಿನ ಹಳ್ಳದ ಮುಳುಗು ಸೇತುವೆಯ ಮೇಲೆ ನೀರು ಹರಿದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಚರಿಸಲು ತೊಂದರೆ ಅನುಭವಿಸಿದರು.

ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಅಜ್ಜೀಪುರ ಸಮೀಪದ ಉಡುತೊರೆ ಜಲಾಶಯ ಭರ್ತಿಯಾಗಿತ್ತು. ಈ ಹಿನ್ನಲೆ ಕಾವೇರಿ ನೀರಾವರಿ ಅಧಿಕಾರಿಗಳು ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರನ್ನು ಹರಿಯ ಬಿಡಲಾಗಿತ್ತು. ಇದರಿಂದ ಶನಿವಾರ ಬೆಳಗ್ಗೆ ನಾಗಣ್ಣ ನಗರದ ಹೊರವಲಯದಲ್ಲಿನ ಹಳ್ಳದ ಮುಳುಗು ಸೇತುವೆಯ ಮೇಲೆ ಹೆಚ್ಚಿನ ನೀರು ಹರಿಯಿತು. ಈ ವೇಳೆ ತೋಟದ ಮನೆಗಳಲ್ಲಿನ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಜೀವ ಭಯದಿಂದ ಕಾದು ನಿಲ್ಲಬೇಕಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಹಳ್ಳವನ್ನು ದಾಟಿಸಿ ಶಾಲಾ ಕಾಲೇಜಿಗೆ ಕಳುಹಿಸಿದರು. ಅಲ್ಲದೇ ಗ್ರಾಮಸ್ಥರು ಸಂಚರಿಸಲು ತುಂಬಾ ತೊಂದರೆ ಅನುಭವಿಸಿದರು.

ಸೇತುವೆ ನಿರ್ಮಿಸುವಂತೆ ಒತ್ತಾಯ: ನಾಗಣ್ಣ ನಗರದ ಹೊರ ವಲಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ತೋಟದ ಮನೆಯಲ್ಲಿ ವಾಸಿಸುತ್ತಿದ್ದು, ಈ ಮಾರ್ಗದಲ್ಲಿ ಉಡುತೊರೆ ಹಳ್ಳವಿದ್ದು, ಮಳೆಗಾಲದ ವೇಳೆ ಮುಳುಗು ಸೇತುವೆಯ ಮೇಲೆ ನೀರು ಹರಿಯುತ್ತದೆ. ಅದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸಿಕೊಡುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

× Chat with us