ಭಿಕ್ಷುಕಿ ಹತ್ಯೆ ಮಾಡಿದ್ದ ಆರೋಪಿಗಳನ್ನು 10 ನಿಮಿಷದಲ್ಲಿ ಪತ್ತೆ ಹಚ್ಚಿದ ಶ್ವಾನ!!

ಮೈಸೂರು: ನಗರದ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಿಕ್ಷುಕಿಯ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳ ಶೋಧ ಕಾರ್ಯಕ್ಕೆ ಇಳಿದ ಶ್ವಾನವೊಂದು, ಹತ್ತೇ ನಿಮಿಷದಲ್ಲಿ ಪತ್ತೆ ಹಚ್ಚಿ ಪೊಲೀಸ್ ವಲಯದಲ್ಲೇ ರಾತ್ರೋರಾತ್ರಿ ಹೆಸರುವಾಸಿಯಾಗಿಬಿಟ್ಟಿದೆ.

ಆ ಶ್ವಾನದ ಹೆಸರೆ ʻಭೀಮʼ. ಯಾವುದೇ ಕಳ್ಳತನದ ಪ್ರಕರಣ, ಕೊಲೆ ಪ್ರಕರಣ ನಡೆದಲ್ಲಿ ಪೊಲೀಸರು ಮೊದಲು ಕರೆಸುವುದು ಶ್ವಾನದಳವನ್ನು. ಘಟನೆ ನಡೆದ ಸ್ಥಳದಲ್ಲಿ ಯಾರೂ ಅಡ್ಡಾಡದಂತೆ ನೋಡಿಕೊಂಡ ನಂತರ ಶ್ವಾನದಳ ಹಾಗೂ ಬೆರಳಚ್ಚು ತಂಡವನ್ನು ಕರೆಸಿ ಪ್ರಾಥಮಿಕ ತನಿಖೆ ನಡೆಸಲಾಗುತ್ತದೆ. ಪ್ರಕರಣದ ಬಗ್ಗೆ ಏನಾದರೂ ಸುಳಿವು ಸಿಕ್ಕಲ್ಲಿ ಅರ್ಧ ತನಿಖೆ ಮುಗಿದಂತೆ. ಹೀಗಾಗಿ, ಮೊನ್ನೆ ನಡೆದ ಭಿಕ್ಷುಕಿಯ ಹತ್ಯೆ ಪ್ರಕರಣದಲ್ಲಿ ಕೂಡ ಪೊಲೀಸರು ಮೊದಲು ಮಾಹಿತಿ ನೀಡಿದ್ದು ಶ್ವಾನದಳಕ್ಕೆ. ಅರೆಬೆತ್ತಲಾಗಿ ಸತ್ತು ಬಿದ್ದಿದ್ದ ಭಿಕ್ಷುಕಿಯ ಶವವನ್ನು ನೋಡಿದಾಕ್ಷಣ ಪೊಲೀಸರಿಗೆ ಇದು ಕೊಲೆಯೇ ಇರಬೇಕು ಎಂಬ ಶಂಕೆ ಮೂಡಿತ್ತು.

ಕೂಡಲೇ ಪೊಲೀಸರು ಶ್ವಾನದಳಕ್ಕೆ ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಬಸಂತ್ ಹಾಗೂ ವಸಂತ್ ಎಂಬ ಪೊಲೀಸ್ ಸಿಬ್ಬಂದಿ ʻಭೀಮʼನೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಇಡೀ ವಾತಾವರಣವನ್ನು ಅವಲೋಕಿಸಿದ್ದಾರೆ. ನಂತರ ಸ್ಥಳದ ವಾಸನೆಯನ್ನು ಆಗ್ರಾಣಿಸಿ ಆರೋಪಿಗಳ ಜಾಡು ಹಿಡಿದು ಹೊರಟ ಭೀಮ, ಅನತಿ ದೂರದಲ್ಲಿ ಬೆಚ್ಚಗೆ ಮಲಗಿದ್ದ ಆರೋಪಿಯ ಅಂಗಿಯನ್ನು ಕಚ್ಚಿ ಎಳೆದಿದ್ದಾನೆ. ಜೊತೆಗೆ ಜೋರಾಗಿ ಬೊಗಳಲಾರಂಭಿಸಿದ್ದಾನೆ. ಭೀಮನ ಆರ್ಭಟ ಕಂಡ ಆರೋಪಿ ʻನಾವೇ ಕೊಲೆ ಮಾಡಿದ್ದು, ನಾವೇ ಮಾಡಿದ್ದುʼ ಎಂದು ಪೊಲೀಸರ ಪಾದಕ್ಕೆ ಎರಗಿದ್ದಾನೆ. ಅಲ್ಲಿಯೂ ಗೋಳಾಡಿದ್ದಾನೆ.

ಪೊಲೀಸರ ಅರ್ಧ ಕೆಲಸ ʻಭೀಮʼ ಮಾಡಿ ಮುಗಿಸಿದ್ದ. ಕೂಡಲೇ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು, ಸೆರೆ ಸಿಕ್ಕ ಆರೋಪಿಯನ್ನು ಪೊಲೀಸರು ತಮ್ಮದೇ ಆದ ʻಶೈಲಿʼಯಲ್ಲಿ ವಿಚಾರಣೆ ನಡೆಸಿದ ವೇಳೆ ಆತ ನಡೆದ ಘಟನೆಯ ವಿವರಗಳನ್ನು ಬಾಯ್ಬಿಟ್ಟಿದ್ದಾನೆ. ಉಳಿದ ಆರೋಪಿಗಳು ಇರುವ ಸ್ಥಳವನ್ನೂ ಪೊಲೀಸರಿಗೆ ತಡ ರಾತ್ರಿಯಲ್ಲಿಯೇ ತೋರಿಸಿಕೊಟ್ಟಿದ್ದಾನೆ. ಇದಕ್ಕೆ ನಮ್ಮ ಭೀಮ ಕಾರಣ ಎಂದು ಪೊಲೀಸರು ಮೆಚ್ಚುಗೆ ಮಾತುಗಳನ್ನಾಡುತ್ತಾರೆ.

ಶ್ವಾನದಳದಲ್ಲಿರುವ ಭೀಮನಿಗೆ 8 ವರ್ಷ ವಯೋಮಾನ. ಆತ ಹಲವಾರು ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾನೆ. ಕೆಲ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈ ಘಟನೆಯ ನಂತರ ಆತ ಎಲ್ಲರಿಗೂ ಐಕಾನ್ ಆಗಿದ್ದಾನೆ.

-ಎಚ್.ಎಸ್.ದಿನೇಶ್‌ಕುಮಾರ್

× Chat with us