ಸ್ತ್ರೀಯರಿಗೆ ಕಂಟಕವಾದ ತಾಲಿಬಾನ್‌ಗಳು: ಮದುವೆಯಾಗಲು ಮನೆಮನೆಗೆ ನುಗ್ಗಿ ಯುವತಿಯರಿಗಾಗಿ ಶೋಧ!

ಕಾಬೂಲ್: ನರಕ ಸದೃಶವಾಗಿರುವ ಅಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಪೈಶಾಚಿಕ ಕೃತ್ಯಗಳು ನಾಗರಿಕರನ್ನು ಹೆದರಿ ಕಂಗಾಲು ಮಾಡಿರುವಾಗಲೇ, ಬಂಡುಕೋರರ ಸ್ತ್ರೀ ಶೋಷಣೆಯ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ.

ರಾಜಧಾನಿ ಕಾಬೂಲ್ ಸೇರಿದಂತೆ ವಿವಿಧ ನಗರಗಳಲ್ಲಿನ ಮನೆ ಮನೆಗಳಿಗೂ ನುಗ್ಗಿ ಮದುವೆಯಾಗಲು ೧೫ ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗಾಗಿ ಶೋಧ ನಡೆಸುತ್ತಿರುವ ಆಘಾತಕಾರಿ ಸಂಗತಿಯೂ ಬಯಲಾಗಿದೆ.

ಪ್ರಕ್ಷುಬ್ಧಮಯ ಕಾಬೂಲ್‌ನಿಂದ ಅಮೆರಿಕಕ್ಕೆ ಸುರಕ್ಷಿತವಾಗಿ ಪಲಾಯನವಾದ ಪತ್ರಕರ್ತೆ ಹೋಲೀ ಮ್ಯಾಕಿ ಅವರು ದಿ ಡಲ್ಲಾಸ್ ಮಾರ್ನಿಂಗ್ ನ್ಯೂಸ್ ಪತ್ರಿಕೆಗೆ ಬರೆದ ಲೇಖನದಲ್ಲಿ ನಿರ್ದಯಿ ತಾಲಿಬಾನ್‌ಗಳು ಮಹಿಳೆಯರ ಮೇಲೆ ನಡೆಸುತ್ತಿರುವ ಅಮಾನವೀಯ ದೌರ್ಜನ್ಯಗಳನ್ನು ವಿವರಿಸಿದ್ದಾರೆ.

ಶಸ್ತ್ರಸಜ್ಜಿತ ತಾಲಿಬಾನ್‌ಗಳು ಕಾಬೂಲ್‌ನಲ್ಲಿ ಮನೆಮನೆಗಳಿಗೆ ನುಗ್ಗುತ್ತಿದ್ದಾರೆ. ೧೫ ವರ್ಷದ ಮೇಲ್ಪಟ ಹುಡುಗಿಯರು, ಯುವತಿಯರು ಮತ್ತು ಮಹಿಳೆಯರನ್ನು ಮದುವೆಯಾಗಲು ಪೀಡಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಅಲ್ಲಿನ ಪರಿಸ್ಥಿತಿ ನರಕವಾಗಿದೆ. ಜನರ ಸ್ಥಿತಿ ಅತ್ಯಂತ ಯಾತನಾಮಯವಾಗಿದೆ. ಸ್ತ್ರೀಯರಿಗೆ ಈಗ ಅಲ್ಲಿ ಸ್ವಾತಂತ್ರ್ಯವಿಲ್ಲ. ತಾಲಿಬಾನ್‌ಗಳ ಕ್ರೌರ್ಯವನ್ನು ಸಹಿಸಿಕೊಳ್ಳುವಂಥ ಅಸಹಾಯಕ ಪರಿಸ್ಥಿತಿ ನೆಲೆಸಿದೆ ಎಂದು ಹೋಲೀ ಮ್ಯಾಕಿ ಲೇಖನದಲ್ಲಿ ನೊಂದು ಬರೆದಿದ್ದಾರೆ.

× Chat with us