ತೌಕ್ತೆ ಚಂಡಮಾರುತ ಪ್ರಭಾವ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ

ಮಡಿಕೇರಿ: ತೌಕ್ತೆ ಚಂಡಮಾರುತದ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ‌.

ಶುಕ್ರವಾರ ರಾತ್ರಿಯಿಂದಲೇ ಮಳೆಯ ಅಬ್ಬರ ಆರಂಭವಾಗಿದ್ದು, ನಿರಂತರ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಮಾದಾಪುರ, ಸುಂಟಿಕೊಪ್ಪ, ಮೂರ್ನಾಡು, ಪೊನ್ನಂಪೇಟೆ ಸೇರಿದಂತೆ ಹಲೆವೆಡೆ ಉತ್ತಮ ಮಳೆಯಾಗುತ್ತಿದೆ.

ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಅಪಾಯದ ಪ್ರದೇಶಗಳಲ್ಲಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಂಜು ಕವಿದ ವಾತವರಣದೊಂದಿಗೆ ಸುರಿಯುತ್ತಿರುವ ಮಳೆ ಚೌಕ್ತೆ ಚಂಡಮಾರುತದ ಪ್ರಭಾವದಿಂದಾದರೂ ಜಿಲ್ಲೆಯಲ್ಲಿ ಮುಂಗಾರು ಪ್ರವೇಶವಾದ ವಾತವರಣ ಸೃಷ್ಟಿಸಿದೆ. ಜಿಲ್ಲೆಯಲ್ಲಿಯೂ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಬೆಳಿಗ್ಗೆ ಹಾಲು ಖರೀದಿ ಹಾಗೂ ಪತ್ರಿಕೆ ವಿತರಣೆಗೆ ಮಳೆ ಕೊಂಚ ಅಡ್ಡಿಯನ್ನುಂಟು ಮಾಡಿತ್ತು. ಉಳಿದಂತೆ ಜಿಲ್ಲೆಯಲ್ಲಿ‌ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

× Chat with us