ಮೇಯರ್‌ ಅವಧಿ ವಿಸ್ತರಿಸಲು ಸಿಎಂಗೆ ಮೊರೆ: ತಸ್ನೀಂ

ಮೈಸೂರು: ಕೊರೊನಾ ಭೀತಿಯಿಂದಾಗಿ ಒಂದು ವರ್ಷದ ಆಡಳಿತವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗದ ಕಾರಣ ತಮ್ಮ ಆಡಳಿತದ ಅವಧಿಯನ್ನು ವಿಸ್ತರಿಸಲು ಸಿಎಂ ಮೊರೆ ಹೋಗಲು ಮೈಸೂರು ಮಹಾಪೌರರಾದ ತಸ್ನೀಂ ನಿರ್ಧರಿಸಿದ್ದು, ಸೋಮವಾರ ತಮ್ಮ ಬೇಡಿಕೆಯ ಪತ್ರ ಸಲ್ಲಿಸಲಿದ್ದಾರೆ.

ಜ.11ರ ಸೋಮವಾರ ಮೈಸೂರು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸುವ ಜತೆಗೆ ನಗರಾಭಿವೃದ್ಧಿ ಸಚಿವರು, ಉಸ್ತುವಾರಿ ಸಚಿವರಿಗೂ ಪತ್ರ ಸಲ್ಲಿಸುವೆ ಎಂದು ಮಹಾಪೌರರಾದ ತಸ್ನೀಂ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಜ.೧೮ರಂದು ಮಹಾಪೌರರಾಗಿ ಅಧಿಕಾರ ವಹಿಸಿಕೊಂಡಿದ್ದೆ. ಒಂದು ತಿಂಗಳು ಸನ್ಮಾನ, ಸಮಾರಂಭ ಅಂತ ಮುಗಿಯಿತು. ಮಾರ್ಚ್‌ನಲ್ಲಿ ಕೊರೊನಾ ಕಾಣಿಸಿಕೊಂಡಿದ್ದರಿಂದ ಆರೇಳು ತಿಂಗಳು ಯಾವ ಕೆಲಸವೂ ಆಗಲಿಲ್ಲ. ದಸರಾ ಸಂದರ್ಭದಲ್ಲಿ ಪ್ರಥಮ ಪ್ರಜೆಯಾದ ಮಹಾಪೌರರು ಕುದುರೆ ಸವಾರಿ ಮಾಡುವುದೂ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಭಾಗಿ ಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ, ಅವಧಿ ವಿಸ್ತರಿಸುವಂತೆ ಕೇಳಿಕೊಳ್ಳುವೆ ಎಂದರು.

ಒಬ್ಬ ಮುಸ್ಲಿಂ ಮಹಿಳೆಯಾಗಿ ಅದರಲ್ಲೂ ಅತಿ ಕಿರಿಯ ವಯಸ್ಸಿನ ಮಹಾಪೌರರಾಗಿದ್ದೇನೆ. ಹೆಚ್ಚಿನ ಸದಸ್ಯರು ಹಿರಿಯರಾಗಿದ್ದಾರೆ. ನನಗೆ ಆಡಳಿತ ನಡೆಸಲು ನಾಲ್ಕು ತಿಂಗಳಷ್ಟೇ ಅವಕಾಶ ಸಿಕ್ಕಿ ದ್ದರಿಂದ ಅಧಿಕಾರ ವಿಸ್ತರಿಸಿದರೆ ಉತ್ತಮ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 150 ಕೋಟಿ ರೂ. ಅನುದಾನ ನೀಡಿದ್ದು, ಬಿಟ್ಟರೆ ಯಡಿಯೂರಪ್ಪ ಸಿಎಂ ಆದ ಮೇಲೆ ಇದುವರೆಗೂ ಒಂದು ನಯಾಪೈಸೆ ಬಂದಿಲ್ಲ. ಪಾಲಿಕೆಗೆ ಬರಬೇಕಾದ ಆದಾಯವೂ ಬರಲಿಲ್ಲ. ಹದಿನೈದನೇ ಹಣಕಾಸು ಆಯೋಗದ ಅನುದಾನ ಬಿಟ್ಟರೆ ಬೇರೆ ಯಾವ ಅನುದಾನ ಬರಲಿಲ್ಲ. ಮಹಾಪೌರರ ವಿವೇಚನಾ ಕೋಟಾದಡಿ 1 ಕೋಟಿ ರೂ. ಅನುದಾನದಲ್ಲಿ ಎಲ್ಲ ಕ್ಷೇತ್ರಗಳಿಗೂ ಹಂಚಲು 50 ಲಕ್ಷ ರೂ. ಪ್ರಕಟಿಸಿದ್ದೆ. ಆದರೆ, ತಾಂತ್ರಿಕ ಕಾರಣದಿಂದ ಸಾಧ್ಯವಾಗಲಿಲ್ಲವೆಂದು ಆಯುಕ್ತರು ಹೇಳಿದ್ದಾರೆ ಎಂದು ಬೇಸರಿಸಿದರು.

ʻನಗರಪಾಲಿಕೆಯಲ್ಲಿ ಮೈತ್ರಿ ಕುರಿತಂತೆ ನಾಯಕರು ತೀರ್ಮಾನ ಮಾಡಲಿ. ನಮಗೆ ಸಹಕಾರ ಕೊಡದೆ ಇದ್ದಿದ್ದು, ನಿಜ. ಕಾಂಗ್ರೆಸ್‌ನ ಕೆಲವು ಹಿರಿಯ ಸದಸ್ಯರೇ ವಿರೋಧ ಮಾಡುತ್ತಿದ್ದರು. ಆದರೆ, ನಮ್ಮ ವಿಚಾರವನ್ನೇ ಮುಂದಿಟ್ಟುಕೊಂಡು ಮೈತ್ರಿ ಮುರಿದುಕೊಳ್ಳುವುದು ಬೇಡ. ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ ಮಾಡಲು ಸಲಹೆ ಕೊಟ್ಟಿದ್ದೇನೆ.ʼ

-ತಸ್ನೀಂ, ಮಹಾಪೌರರು.

× Chat with us