ಅನುದಾನ ರಹಿತ ಶಾಲಾ, ಕಾಲೇಜು ಶಿಕ್ಷಕರಿಗೆ ಸಂಕಷ್ಟ: ನೆರವಿಗೆ ಸರ್ಕಾರಕ್ಕೆ ತನ್ವೀರ್‌ ಸೇಠ್‌ ಪತ್ರ

ಮೈಸೂರು: ಕೋವಿಡ್‌ನಿಂದಾಗಿ ಅನುದಾನ ರಹಿತ ಹಾಗೂ ಖಾಸಗಿ ಅನುದಾನ ರಹಿತ ಶಾಲಾ/ಕಾಲೇಜುಗಳ ಶಿಕ್ಷಕರು ವೇತನವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಅವರಿಗೆ ಕೋವಿಡ್‌ ವಿಶೇಷ ಆರ್ಥಿಕ ನೆರವು ಘೋಷಿಸುವಂತೆ ಸರ್ಕಾರಕ್ಕೆ ಶಾಸಕ ತನ್ವೀರ್‌ ಸೇಠ್‌ ಪತ್ರ ಬರೆದಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಇದರಿಂದ ಕೆಲಸ, ಸಂಬಳವಿಲ್ಲದೇ ಅನುದಾನ ರಹಿತ, ಖಾಸಗಿ ಅನುದಾನ ರಹಿತ ಶಾಲಾ-ಕಾಲೇಜುಗಳ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಶಾಲಾ/ಕಾಲೇಜುಗಳಲ್ಲಿ ಕರ್ಯನಿರ್ವಹಿಸುತ್ತಿರುವ ಶಿಕ್ಷಕರು, ಶಿಕ್ಷಕೇತರರು ಮತ್ತು ಕುಟುಂಬ ಸದಸ್ಯರು ಕೋವಿಡ್‌ ಸೋಂಕಿಗೆ ಒಳಗಾದರೆ ಚಿಕಿತ್ಸೆ ಪಡೆಯಲು ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು. ಈ ವರ್ಗದ ಎಲ್ಲಾ ಶಿಕ್ಷಕರಿಗೆ ಕರ್ನಾಟಕ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯತ್ವ ನೀಡಿ ಅದರಡಿ ಶಾಲಾ ಶಿಕ್ಷಕರಿಗೆ ಇರುವ ಎಲ್ಲಾ ಸೌಲಭ್ಯವನ್ನು ಇವರಿಗೂ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಸ್ತುತ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇದನ್ನು ಎಲ್ಲಾ ಶಿಕ್ಷಕರಿಗೂ ವಿಸ್ತರಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಾರಿಯಲ್ಲಿರುವ ಉಚಿತ ಸೈಕಲ್‌, ಬಿಸಿಯೂಟ, ಕ್ಷೀರಭಾಗ್ಯ ಮೊದಲಾದ ಯೋಜನೆಗಳಿಗೆ ನಿಗದಿಯಾಗಿದ್ದ ಅನುದಾನ ರಜೆ ಹಿನ್ನೆಲೆಯಲ್ಲಿ ಬಳಕೆಯಾಗಿಲ್ಲ. ಈ ಅನುದಾನವನ್ನು ಸಂಕಷ್ಟದಲ್ಲಿರುವ ಅನುದಾನ ರಹಿತ ಶಾಲಾ/ಕಾಲೇಜು ಶಿಕ್ಷಕರಿಗೆ ನೀಡುವಂತೆ ತಿಳಿಸಿದ್ದಾರೆ.

× Chat with us