ಸಿದ್ದು ವಿರುದ್ಧ ಘೋಷಣೆ: ಕೊನೆಗೂ ಅಮಾನತುಗೊಂಡ ತನ್ವೀರ್‌ ಸೇಠ್‌ ಬೆಂಬಲಿಗರು

ಮೈಸೂರು: ಮೇಯರ್ ಚುನಾವಣೆ ನಡೆದ ಘಟನೆಯ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿದ ಆರೋಪದ ಮೇಲೆ ಶಾಸಕ ತನ್ವೀರ್‌‌ ಸೇಠ್ ಬೆಂಬಲಿಗರನ್ನು ಪಕ್ಷದಿಂದ ಅಮಾನತುಗೊಡಿಸಿ ಆದೇಶ ಹೊರಡಿಸಲಾಗಿದೆ.

ಅಜೀಜ್‌ಸೇಠ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಶಾಹಿದ್, ಮೈಸೂರು ನಗರ ಡಿಸಿಸಿ ಉಪಾಧ್ಯಕ್ಷ ಅನ್ವರ್‌ ಪಾಷ, ಕೆಪಿಸಿಸಿ ಸದಸ್ಯ ಪಿ.ರಾಜು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ, ಶಿಸ್ತುಪಾಲನಾ ಸಮಿತಿಗೆ ಕಳುಹಿಸಲಾಗಿದೆ.

ಫೆ.24ರಂದು ನಗರಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆ ನಡೆದ ಘಟನೆಯ ಬಳಿಕ ಜಿಲ್ಲೆಯ ಕಾಂಗ್ರೆಸ್ ಮುಖಂಡರು ರಾಜ್ಯ‌ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿ, ವೈಯಕ್ತಿಕವಾಗಿ ಘೋಷಣೆಗಳನ್ನು ಕೂಗಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹಾನಿ ಉಂಟಾಗಿದೆ. ಆದ್ದರಿಂದ, ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಮಾನತುಗೊಳಿಸುವಂತೆ ನಗರ ಅಧ್ಯಕ್ಷ ಆರ್.ಮೂರ್ತಿ ಅವರು ಕೆಪಿಸಿಸಿಗೆ ಶಿಫಾರಸ್ಸು ಮಾಡಿದ್ದರು. ಇದನ್ನು ಪರಿಗಣಿಸಿದ ಕೆಪಿಸಿಸಿಯು ಮೂವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದೆ ಎಂದು ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.

× Chat with us